ಕೇರಳದಲ್ಲಿ ಚಹಾ ವಿಚಾರಕ್ಕೆ ಜಗಳ; ಸೊಸೆಯನ್ನು ಮಚ್ಚಿನಿಂದ ಕೊಚ್ಚಿ ಕೊಂದ ಅತ್ತೆ!

ಕೇರಳ: ಮಲಪ್ಪುರಂ ಜಿಲ್ಲೆಯಲ್ಲಿ ಅತ್ತೆ ಮತ್ತು ಸೊಸೆ ನಡುವೆ ನಡೆದ ಸಣ್ಣ ಜಗಳ ಭೀಕರ ಕೊಲೆಯಲ್ಲಿ ಅಂತ್ಯವಾಗಿರುವುದು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಕೇವಲ ಒಂದು ಕಪ್ ಚಹಾ ತಯಾರಿಸುವ ವಿಷಯಕ್ಕೆ ಶುರುವಾದ ಜಗಳವು ವಿಕೋಪಕ್ಕೆ ಹೋಗಿ, ಅತ್ತೆಯೇ ತನ್ನ ಸೊಸೆಯನ್ನು ಮಚ್ಚಿನಿಂದ ಕೊಚ್ಚಿ ಕೊಂದಿರುವ ಘಟನೆ ಮಲಪ್ಪುರಂನ ನೀಲಂಬೂರು ಬಳಿಯ ಕೂಟ್ಟಂಪಾರದಲ್ಲಿ ಸಂಭವಿಸಿದೆ. ಮೃತ ದುರ್ದೈವಿಯನ್ನು 28 ವರ್ಷದ ರಜಿಲಾ ಎಂದು ಗುರುತಿಸಲಾಗಿದ್ದು, ಈ ಘಟನೆಯು ಕೌಟುಂಬಿಕ ಕಲಹದ ಭೀಕರ ಮುಖವನ್ನು ಅನಾವರಣಗೊಳಿಸಿದೆ.
ಅತ್ತೆ ಶಾಂತಾ ತಯಾರಿಸಿದ್ದ ಚಹಾವನ್ನು ಸೊಸೆ ರಜಿಲಾ ಎಸೆದಿದ್ದಾಳೆ ಎಂಬ ವಿಷಯ ಜಗಳಕ್ಕೆ ಕಿಡಿಯಿಟ್ಟಿದೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ಕೈಮೀರಿದಾಗ, ಆವೇಶಕ್ಕೊಳಗಾದ ಅತ್ತೆ ಶಾಂತಾ ಮನೆಯಲ್ಲಿದ್ದ ಮಚ್ಚಿನಿಂದ ಸೊಸೆಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಈ ರಕ್ತಪಾತದ ದೃಶ್ಯವನ್ನು ಕಂಡು ರಜಿಲಾ ಅವರ 10 ಮತ್ತು 4 ವರ್ಷದ ಪುಟ್ಟ ಹೆಣ್ಣುಮಕ್ಕಳು ಅಮ್ಮನನ್ನು ರಕ್ಷಿಸಲು ಹರಸಾಹಸ ಪಟ್ಟರೂ, ಅಜ್ಜಿಯ ಕ್ರೌರ್ಯವನ್ನು ತಡೆಯಲು ಅವರಿಂದ ಸಾಧ್ಯವಾಗಲಿಲ್ಲ.
ಘಟನೆ ನಡೆದ ಸಮಯದಲ್ಲಿ ರಜಿಲಾ ಅವರ ಪತಿ ಸುನಿಲ್ ಬಾಬು ಅವರು ಆಟೋ ರಿಕ್ಷಾ ಚಾಲನೆಗೆಂದು ಹೊರಗೆ ಹೋಗಿದ್ದರು. ಮನೆಯೊಳಗೆ ಕೇಳಿಬಂದ ಕಿರುಚಾಟ ಮತ್ತು ಮಕ್ಕಳ ಜೋರಾದ ಅಳುವನ್ನು ಕೇಳಿ ನೆರೆಹೊರೆಯವರು ಓಡಿ ಬಂದಾಗ, ರಜಿಲಾ ಮಲಗುವ ಕೋಣೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣವೇ ಅವರನ್ನು ನಿಲಂಬೂರು ಜಿಲ್ಲಾ ಆಸ್ಪತ್ರೆಗೆ ಸಾಗಿಸಲು ಯತ್ನಿಸಲಾಯಿತಾದರೂ, ತೀವ್ರ ರಕ್ತಸ್ರಾವದ ಕಾರಣ ಅವರು ದಾರಿಯಲ್ಲೇ ಕೊನೆಯುಸಿರೆಳೆದಿದ್ದಾರೆ.
ಘಟನಾ ಸ್ಥಳಕ್ಕೆ ಬಂದ ಪ್ರತ್ಯಕ್ಷದರ್ಶಿಗಳು ಹೇಳುವಂತೆ, ಕೃತ್ಯವೆಸಗಿದ ನಂತರ ಅತ್ತೆ ಶಾಂತಾ ಯಾವುದೇ ಭೀತಿಯಿಲ್ಲದೆ ಅತ್ಯಂತ ಶಾಂತವಾಗಿ ತನ್ನ ಕೈಗಳಿಗೆ ಅಂಟಿದ್ದ ರಕ್ತವನ್ನು ತೊಳೆಯುತ್ತಿದ್ದರು. ನೆರೆಹೊರೆಯವರು ಏನು ನಡೆಯಿತು ಎಂದು ಪ್ರಶ್ನಿಸಿದಾಗಲೂ ಅವರು ಯಾವುದೇ ಮೌನ ಮುರಿಯದೆ ಮೌನವಾಗಿದ್ದರು ಎನ್ನಲಾಗಿದೆ. ಸದ್ಯ ಪೊಲೀಸರು ಆರೋಪಿ ಶಾಂತಾ ಅವರನ್ನು ವಶಕ್ಕೆ ಪಡೆದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಜೇರಿ ವೈದ್ಯಕೀಯ ಕಾಲೇಜಿಗೆ ರವಾನಿಸಿದ್ದಾರೆ.