ರಾಜ್ಯದಲ್ಲಿ ಮುಂಗಾರು ಮಳೆಯಿಂದ ಅತಿವೃಷ್ಠಿ ಉಂಟಾಗಿ, ಅಪಾರ ಬೆಳೆ ಹಾನಿಯಾಗಿದೆ. ರೈತರು ಕಷ್ಟಪಟ್ಟು ಬೆಳೆದ ಬೆಳೆಗಳು ನಾಶ ಆಗಿವೆ. ರಾಜ್ಯ ಸರ್ಕಾರ, ಸಚಿವರು ತುರ್ತು ಪರಿಹಾರ ನೀಡಬೇಕು ಎಂದು ಜೆಡಿಎಸ್ ಮುಖಂಡ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದ್ದಾರೆ..
ರಾಜ್ಯಾದ್ಯಂತ ಭಾರೀ ಮಳೆ ಮತ್ತು ಪ್ರವಾಹದಿಂದ ವ್ಯಾಪಕ ಬೆಳೆ ಹಾನಿ ಸಂಭವಿಸಿದೆ. 1.42 ಲಕ್ಷ ಹೆಕ್ಟೇರ್ ಜಮೀನಿನಲ್ಲಿ ಬೆಳೆದ ಬೆಳೆ ಹಾನಿಯಾಗಿದೆ. ರೈತರು ಕಷ್ಟಪಟ್ಟು ಬೆಳೆದ ಹತ್ತಿ,ತೊಗರಿ ಬೆಳೆ ನಾಶವಾಗಿದೆ.
ನೆರೆಹಾನಿಯಿಂದ ಜನಸಾಮಾನ್ಯರು ಸಹ ಮನೆಗಳನ್ನು ಕಳೆದುಕೊಂಡು ಸಂಕಷ್ಟ ಅನುಭವಿಸುತ್ತಿದ್ದಾರೆ. ರೈತ ವಿರೋಧಿ ಕಾಂಗ್ರೆಸ್ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳು ನೆರವಿಗೆ ಧಾವಿಸದೆ, ಪರಿಹಾರಗಳನ್ನು ಒದಗಿಸಿದೆ ನಿರ್ಲಕ್ಷ್ಯವಹಿಸಿದೆ.
ಈ ಹಿನ್ನೆಲೆಯಲ್ಲಿ ನೆರೆ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಲು ಜನತಾದಳ ಜಾತ್ಯತೀತ ಪಕ್ಷದ ವತಿಯಿಂದ ರಾಜ್ಯ ಪ್ರವಾಸ ಕೈಗೊಳ್ಳಲಾಗಿದ್ದು, ಬೆಳೆ ಹಾನಿ, ಮನೆ ಕುಸಿತ ಪ್ರದೇಶಗಳಿಗೆ ಭೇಟಿ ನೀಡಿ ವಸ್ತು ಸ್ಥಿತಿ ವರದಿಯನ್ನು ರಾಜ್ಯ ಸರ್ಕಾರಕ್ಕೆ ನೀಡಲಿದ್ದೇವೆಂದು ಹೇಳಿದ್ದಾರೆ. ಇನ್ನು ಕರ್ನಾಟಕದ ಕಿತ್ತೂರು, ಕಲ್ಯಾಣ ಕರ್ನಾಟಕ, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲಿ ಸುಮಾರು ಶೇ.34 ರಷ್ಟು ಅಧಿಕ ಮಳೆಯಾಗಿದ್ದು, ಬೆಳೆ ನಾಶವಾಗಿದೆ, ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸೇರಿದಂತೆ ಯಾವುದೇ ಸಚಿವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿಲ್ಲ ಅಥವಾ ಯಾವುದೇ ಹೇಳಿಕೆ ನೀಡಿಲ್ಲ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಮತ್ತು ಅವರಿಗೆ ಸ್ವಲ್ಪ ಭರವಸೆ ನೀಡುವ ಬದಲು, ರಾಜ್ಯ ಸರ್ಕಾರವು ಸಚಿವರ ಪ್ರಯಾಣಕ್ಕಾಗಿ ಹೆಲಿಕಾಪ್ಟರ್-ಖಾಸಗಿ ಜೆಟ್ ಖರೀದಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಒಂದು ಹೆಲಿಕಾಪ್ಟರ್ ಸುಮಾರು 80 ಕೋಟಿ ರೂ. ಮತ್ತು ಖಾಸಗಿ ಜೆಟ್ ರೂ. 150 ಕೋಟಿ ವರೆಗೆ ವೆಚ್ಚವಾಗಬಹುದು. ಇವುಗಳ ಖರೀದಿ ಬಗ್ಗೆ ಚರ್ಚಿಸಲು ಸರ್ಕಾರದ ಬಳಿ ಸಮಯವಿದೆ ಎಂದರೆ, ರೈತರ ಬಗ್ಗೆ ಯೋಚಿಸಲು ಸಮಯವೇಕಿಲ್ಲ ಎಂದು ಪ್ರಶ್ನಿಸಿದ್ದಾರೆ.