ನವದೆಹಲಿ : ಮೀಸಲು ಕುರಿತಂತೆ ರಾಜ್ಯಗಳಿಗೆ ದೇಶದ ಮೊದಲ ಪ್ರಧಾನಿ ಪಂಡಿತ್‌ ಜವಹರಲಾಲ್‌ ನೆಹರು ಬರೆದಿದ್ದ ಪತ್ರಗಳಲ್ಲಿನ ಅಂಶಗಳನ್ನು ಪ್ರಧಾನಿ ನರೇಂದ್ರ ಮೋದಿ ತಿರುಚಿದ್ದಾರೆ ಎಂದು ಆರೋಪಿಸಿರುವ ರಾಜ್ಯಸಭೆಯ ವಿಪಕ್ಷ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಈ ವಿಷಯದಲ್ಲಿ ದೇಶವನ್ನು ದಿಕ್ಕು ತಪ್ಪಿಸಿದ್ದಕ್ಕಾಗಿ ಮೋದಿ ಕ್ಷಮೆ ಯಾಚಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಸಂವಿಧಾನಕ್ಕೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ರಾಜ್ಯಸಭೆಯಲ್ಲಿ ನಡೆದ ಚರ್ಚೆ ವೇಳೆ ಸೋಮವಾರ ಮಾತನಾಡಿದ ಖರ್ಗೆ, ‘ಮೋದಿ ತಮ್ಮ ಭಾಷಣದಲ್ಲಿ 1947-1952 ರ ನಡುವೆ ದೇಶದಲ್ಲಿ ಚುನಾಯಿತ ಸರ್ಕಾರವೇ ಇರಲಿಲ್ಲ. ಈ ವೇಳೆ ಕಾಂಗ್ರೆಸ್‌, ಸಂವಿಧಾನಕ್ಕೆ ಅಕ್ರಮವಾಗಿ ತಿದ್ದುಪಡಿ ತಂದಿತ್ತು ಎಂದು ಆರೋಪಿಸಿದ್ದಾರೆ. ಆದರೆ ಸಂವಿಧಾನಕ್ಕೆ ಮೊದಲ ತಿದ್ದುಪಡಿ ತಂದಿದ್ದು ಶ್ಯಾಮ್‌ಪ್ರಸಾದ್‌ ಮುಖರ್ಜಿ ಅವರನ್ನು ಒಳಗೊಂಡಿದ್ದ ಸಂವಿಧಾನಿಕ ಸಭೆಯ ಸದಸ್ಯರು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಮೀಸಲು ನೀಡಲು, ಉದ್ಯೋಗ ಮತ್ತು ಶಿಕ್ಷಣದ ಕುರಿತ ಇದ್ದ ಸಮಸ್ಯೆ ಪರಿಹರಿಸಲು ಮತ್ತು ಜಮೀನ್ದಾರಿ ಪದ್ಧತಿಯನ್ನು ತೊಡೆದು ಹಾಕಲು ಸಂವಿಧಾನಕ್ಕೆ ತಿದ್ದುಪಡಿ ತರಲಾಗಿತ್ತು’ ಎಂದರು

‘ತಿದ್ದುಪಡಿಯ ಇತರೆ ಅಂಶಗಳೆಂದರೆ, ಕೋಮುವಾದಿ ಪ್ರಾಪಗೆಂಡಾಕ್ಕೆ ಬ್ರೇಕ್‌ ಹಾಕುವುದಾಗಿತ್ತು. 1950ರ ಜು.3ರಂದು ಸರ್ದಾರ್‌ ಪಟೇಲ್ ಅವರು ನೆಹರು ಅವರಿಗೆ ಬರೆದ ಪತ್ರದಲ್ಲಿ, ‘ಮೇಲ್ಕಂಡ ಸಮಸ್ಯೆಗಳಿಗೆ ಸಾಂವಿಧಾನಿಕ ತಿದ್ದುಪಡಿಯೊಂದೇ ಪರಿಹಾರ ಎಂದು ತಿಳಿಸಿದ್ದರು’ ಎಂಬುದನ್ನು ಸದನದ ಗಮನಕ್ಕೆ ತರಲು ಬಯಸುತ್ತೇನೆ’ ಎಂದು ಖರ್ಗೆ ಹೇಳಿದರು. ‘ಈ ಕಾರಣಕ್ಕಾಗಿಯೇ ರಾಜ್ಯಗಳ ಮುಖ್ಯಮಂತ್ರಿಗಳಿಗೆ ನೆಹರೂ ಅವರು ಪತ್ರ ಬರೆದಿದ್ದರು. ಇದೇ ಅಂಶವನ್ನು ಪ್ರಧಾನಿ ತಮ್ಮ ಭಾಷಣದಲ್ಲಿ ವಾಸ್ತವ ಅಂಶಗಳನ್ನು ತಿರುಚಿ ಮೀಸಲಾತಿ ವಿರುದ್ಧ ಸಿಎಂಗಳಿಗೆ ನೆಹರು ಸಿಎಂಗಳಿಗೆ ಪತ್ರ ಬರೆದಿದ್ದರು ಎಂದು ಹೇಳಿ ನೆಹರು ಅವರ ಮಾನಹಾನಿಗೆ ಯತ್ನಿಸಿದ್ದಾರೆ. ಹೀಗಾಗಿ ಮೋದಿ, ಈ ಸದನ ಮತ್ತು ದೇಶದ ಮುಂದೆ ಕ್ಷಮೆ ಯಾಚಿಸಬೇಕು’ ಎಂದು ಖರ್ಗೆ ಆಗ್ರಹಿಸಿದರು.’ಜೊತೆಗೆ, ಪ್ರಧಾನಿ ಭೂತಕಾಲದಲ್ಲಿ ವಾಸಿಸುತ್ತಿದ್ದಾರೆಯೇ ಹೊರತೂ ವರ್ತಮಾನದಲ್ಲಲ್ಲ. ಪ್ರಧಾನಿ ಪ್ರಜಾಪ್ರಭುತ್ವವನ್ನು ಬಲಪಡಿಸಲು ಈಗ ಏನು ಮಾಡಲಾಗಿದೆ ಎಂಬುದನ್ನು ವಿವರಿಸಿದ್ದರೆ ಹೆಚ್ಚು ಅರ್ಥಪೂರ್ಣವಾಗುತ್ತಿತ್ತು’ ಎಂದು ಖರ್ಗೆ ಮೋದಿಗೆ ಛಾಟಿ ಬೀಸಿದರು.

Leave a Reply

Your email address will not be published. Required fields are marked *

Verified by MonsterInsights