ಚೀನಾದಲ್ಲಿ ನಡೆದ ಎಸ್‌ಸಿಒ ಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಯೋತ್ಪಾದನೆ ವಿರುದ್ಧ ಧ್ವನಿ ಎತ್ತಿದರು. ಗಡಿಯಾಚೆಗಿನ ಭಯೋತ್ಪಾದನೆಯು ಭಾರತ ಮತ್ತು ಚೀನಾ ಎರಡರ ಮೇಲೂ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ ಹೇಳಿದರು.
ಗಡಿಯಲ್ಲಿ ಶಾಂತಿ, ಸ್ಥಿರತೆ ಅಗತ್ಯ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು. ಬಳಿಕ ಪರಸ್ಪರ ಅಭಿವೃದ್ಧಿ, ವ್ಯಾಪಾರ ಸಮತೋಲನ, ಭಯೋತ್ಪಾದನೆ ವಿರುದ್ಧದ ಹೋರಾಟ ಹಾಗೂ ಜನರಿಂದ ಜನರ ಸಂಪರ್ಕ ಹೆಚ್ಚಿಸುವ ವಿಷಯಗಳ ಬಗ್ಗೆ ಒಟ್ಟಾಗಿ ಸಾಗುವ ಕುರಿತು ಚರ್ಚೆ ನಡೆಯಿತು.
ಕೊನೆಯಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಭಾರತ ಮತ್ತು ಚೀನಾ ಒಟ್ಟಾಗಿ ಕೆಲಸ ಮಾಡಲು ಉಭಯ ನಾಯಕರು ಒಪ್ಪಿಕೊಂಡಿರುವುದಾಗಿ ಹೇಳಿದ್ದಾರೆ.
ಜಾಗತಿಕ ವಿಷಯಗಳ ಬಗ್ಗೆಯೂ ಚರ್ಚಿಸಿದ ವಿಶ್ವನಾಯಕರು ವಿಶ್ವವ್ಯಾಪಾರ ಸ್ಥಿರಗೊಳಿಸುವಲ್ಲಿ ಭಾರತ ಮತ್ತು ಚೀನಾದ ಪಾತ್ರದ ಬಗ್ಗೆಯೂ ಚರ್ಚಿಸಿದರು. ಇದೇ ವೇಳೆ ನರೇಂದ್ರ ಮೋದಿ ಅವರು 2026ಕ್ಕೆ ಭಾರತದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಗೆ ಕ್ಸಿ ಜಿನ್‌ಪಿಂಗ್ ಅವರನ್ನು ಆಹ್ವಾನಿಸಿದರು. ಇದರೊಂದಿಗೆ ಗಡಿ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲು ಬೇಕಾದ ಉಪಕ್ರಮಗಳ ಬಗ್ಗೆ ಒತ್ತಿ ಹೇಳಿದರು ಎಂದು ಮಿಶ್ರಿ ತಿಳಿಸಿದರು.