ಬೆಂಗಳೂರು: ನರೇಂದ್ರ ಮೋದಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಸುಳ್ಳನ್ನೇ ಮಾರುಕಟ್ಟೆ ಮಾಡಿಕೊಂಡಿದ್ದಾರೆ. ಅಪ್ರಸ್ತುತ ವಿಷಯಗಳನ್ನು ಹೇಳುವುದು, ಜನರ ಭಾವನೆಗಳನ್ನು ಕೆರಳಿಸುವುದು, ಧ್ರುವೀಕರಣ ಮಾಡುವ ಮೂಲಕ ಅವರ ಘನತೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಇದರಿಂದ ನಮಗೇನೂ ಹಾನಿಯಿಲ್ಲ. ಜನರು ಸುಳ್ಳ ಹೇಳಿದರೆ ಅರ್ಥ ಮಾಡಿಕೊಳ್ಳುವ ಶಕ್ತಿ ಹೊಂದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೀಸಲಾತಿ ಮತ್ತು ಮಂಗಳಸೂತ್ರದ ವಿಷಯದಲ್ಲಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಇನ್ನೂ ಕ್ರಮ ಕೈಗೊಂಡಿಲ್ಲ. ಅವರಿಗೆ ನೋಟೀಸು ಕೊಟ್ಟಿದ್ದಾರೆ. ನಾವು ಕ್ರಮ ಕೈಗೊಳ್ಳುವ ಬಗ್ಗೆ ನಿರೀಕ್ಷೆಯಲ್ಲಿದ್ದಾರೆ. ಪಕ್ಷದ ಅಧ್ಯಕ್ಷರಿಗೆ ನೀಡಿದ್ದಾರೆ. ಬೇರೆ ವಿಚಾರದಲ್ಲಿ ಮೋದಿಯವರಿಗೂ ನೋಟೀಸು ನೀಡಿದ್ದಾರೆ ಎಂದು ತಿಳಿಸಿದರು.
ನಾವು ಸ್ಪಷ್ಟವಾಗಿ ಜನರಿಗೆ ನಾವು ಏನು ಮಾಡಿದ್ದೇವೆ ಎಂದು ಪ್ರಸ್ತಾಪ ಮಾಡಿದ್ದೇವೆ. ಕೇಂದ್ರ ಸರ್ಕಾರ ಏನು ಹೇಳಿದ್ದರು, ಏನು ಮಾಡಿದ್ದಾರೆ ಎಂಬುದನ್ನೆಲ್ಲ ಹೇಳಿದ್ದೇವೆ. ಜನರು ನೀಡುವ ತೀರ್ಪು ಅಂತಿಮ. ನಮ್ಮ ಐದು ಗ್ಯಾರಂಟಿಗಳು ಮತ್ತೆ ನುಡಿದಂತೆ ನಡೆದಿರುವುದು ಜನರ ಮೇಲೆ ಪರಿಣಾಮವಾಗಿದೆ. ಮತ್ತು ಕಾಂಗ್ರೆಸ್ ಬಗ್ಗೆ ವಿಶ್ವಾಸ, ನಂಬಿಕೆ ಬಂದಿದೆ ಎಂಬ ವಿಶ್ವಾಸ ನನ್ನದು ಎಂದು ತಿಳಿಸಿದರು.
ಜನ ತಮ್ಮ ವಿವೇಚನೆಯ ಮೇರೆಗೆ ತೀರ್ಪು ಕೊಡುತ್ತಾರೆ. ನಮ್ಮ ಮಾತುಗಳನ್ನೂ ಗಮನಕ್ಕೆ ತೆಗೆದುಕೊಳ್ಳುತ್ತಾರೆ, ಜನರನ್ನು ದಡ್ಡರೆಂದು ನಾವು ತಿಳಿದುಕೊಂಡರೆ, ನಾವೇ ದಡ್ಡರು. ಅವರು ಬುದ್ಧಿವಂತರು ಹಾಗೂ ರಾಜಕೀಯವಾಗಿ ಪ್ರಬುದ್ಧರಿದ್ದಾರೆ. ಎಲ್ಲ ಕಾಲದಲ್ಲೂ ನೋಡಿ, ಜನರು ಬಹಳ ಬುದ್ಧಿವಂತಿಕೆಯಿಂದ ಮತ ಚಲಾಯಿಸಿದ್ದಾರೆ ಎಂದು ಸಿದ್ದರಾಮಯ್ಯ ನುಡಿದರು.