ಅಬಕಾರಿ ಇಲಾಖೆಯ ಭ್ರಷ್ಟಾಚಾರದ ಆರೋಪ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದ್ದು, ಸದನದಲ್ಲಿ ಶಾಸಕರ ನಡುವಿನ ವೈಯಕ್ತಿಕ ವಾಕ್ಸಮರ ತಾರಕಕ್ಕೇರಿದೆ. ಸಚಿವ ತಿಮ್ಮಾಪುರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ನಡೆಸುತ್ತಿರುವ ಅಹೋರಾತ್ರಿ ಧರಣಿಯ ವೇಳೆ, ಬಸವಕಲ್ಯಾಣ ಬಿಜೆಪಿ ಶಾಸಕ ಶರಣು ಸಲಗರ್ ಮತ್ತು ಅರಸೀಕೆರೆ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಅವರು ಬಹಿರಂಗವಾಗಿ ಪರಸ್ಪರ ಏಕವಚನದಲ್ಲಿ ನಿಂದಿಸಿಕೊಂಡ ಘಟನೆ ನಡೆದಿದೆ.
ಸದನದ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಶರಣು ಸಲಗರ್ ಅವರು, “ದೇವೇಗೌಡರಿಗೆ ದೋಖಾ ಮಾಡಿದ ಶಿವಲಿಂಗೇಗೌಡರಿಗೆ ಧಿಕ್ಕಾರ” ಎಂದು ಘೋಷಣೆ ಕೂಗಿದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ ಶಿವಲಿಂಗೇಗೌಡರು, ಶರಣು ಸಲಗರ್ ಅವರ ವಿರುದ್ಧ ವೈಯಕ್ತಿಕ ವಿಚಾರಗಳನ್ನು ಎಳೆದುತಂದು ಗುಡುಗಿದರು. ಚಿಂಚೋಳಿಯ ಹಳೆಯ ಪ್ರಕರಣವೊಂದನ್ನು ಪ್ರಸ್ತಾಪಿಸಿ ಆಕ್ರೋಶ ಹೊರಹಾಕಿದ ಶಿವಲಿಂಗೇಗೌಡರು, ರಾಜಕೀಯ ಹೋರಾಟದ ನಡುವೆ ಅತ್ಯಂತ ಕೀಳುಮಟ್ಟದ ಶಬ್ದಗಳನ್ನು ಬಳಸಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷಗಳು ಭ್ರಷ್ಟಾಚಾರದ ಅಸ್ತ್ರ ಹಿಡಿದು ಬೀದಿಗಿಳಿದಿರುವ ಬೆನ್ನಲ್ಲೇ, ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರು ಸಾರ್ವಜನಿಕವಾಗಿ ಈ ರೀತಿ ಬೈದಾಡಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ. ಅಬಕಾರಿ ಇಲಾಖೆಯ ಲಂಚದ ಆರೋಪಕ್ಕೆ ಸಚಿವರು ರಾಜೀನಾಮೆ ನೀಡಬೇಕೆಂಬ ಪಟ್ಟು ಒಂದು ಕಡೆಯಾದರೆ, ಶಾಸಕರ ನಡುವಿನ ಈ ವೈಯಕ್ತಿಕ ಕಿತ್ತಾಟ ಸದನದ ಹೊರಗಿನ ರಾಜಕೀಯ ವಾತಾವರಣವನ್ನು ಮತ್ತಷ್ಟು ಕದಡಿದೆ.


