ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ .ವಿಜಯೇಂದ್ರ ಸೇರಿದಂತೆ ಇದೇ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದ 27 ಮಂದಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದು, ವಿಶೇಷ ಅನುದಾನ ಬಿಡುಗಡೆಗೆ ಮನವಿ ಮಾಡಿದ್ದಾರೆ. ಅನುದಾನ ಕೊರತೆ ಹಿನ್ನೆಲೆ, ಮೊದಲ ಬಾರಿ ಗೆದ್ದವರಿಗೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕೆಂದು ಮನವಿ ಮಾಡಲಾಗಿದೆ. 2 ವರ್ಷಗಳಿಗೆ 100 ಕೋಟಿ ರೂ. ಅನುದಾನ ಬಿಡುಗಡೆಗೆ ಮಾಡುವಂತೆ ಶಾಸಕರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.ಸಿಎಂ ಸಿದ್ದರಾಮಯ್ಯಗೆ ಉಡುಪಿ ಶಾಸಕ ಯಶ್​ಪಾಲ್ ಸುವರ್ಣ ಬರೆದ ಪತ್ರಕ್ಕೆ ಬಿವೈ ವಿಜಯೇಂದ್ರ ಸೇರಿ 27 ಶಾಸಕರು ಸಹಿ ಹಾಕಿದ್ದಾರೆ. ಜೆಡಿಎಸ್ ಪಕ್ಷದ ಶಾಸಕರೂ ಸಹಿ ಹಾಕಿದ್ದಾರೆ.

ಶಾಸಕರ ಪತ್ರದಲ್ಲೇನಿದೆ?

ಮೊದಲ ಬಾರಿಗೆ ನೂತನವಾಗಿ ಶಾಸಕರಾಗಿ ಆಯ್ಕೆಯಾಗಿ 1 ವರ್ಷ 7 ತಿಂಗಳುಗಳು ಪೂರ್ಣಗೊಳಿಸಿ, 5ನೇ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ಕ್ಷೇತ್ರದ ಜನರಿಗೆ ನೂತನವಾಗಿ ಆಯ್ಕೆಯಾದ ನಮ್ಮೆಲ್ಲ ಶಾಸಕರ ಮೇಲೆ ಹೆಚ್ಚಿನ ನಿರೀಕ್ಷೆಯಿದೆ. ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಹಾಗೂ ನಿರ್ವಹಣೆ ಕೆಲಸಗಳಿಗೆ ಜನರಿಂದ ದಿನಂಪ್ರತಿ ಮನವಿಗಳನ್ನು ಸ್ವೀಕರಿಸುತ್ತಿದ್ದೇವೆ. ಜನರ ಸಮಸ್ಯೆಗಳನ್ನು ನಿವಾರಿಸಲು ಮತ್ತು ಕ್ಷೇತ್ರದಲ್ಲಿ ಹೊಸ ಅಗತ್ಯ ಯೋಜನೆಗಳನ್ನು ಪ್ರಾರಂಭಿಸಲು ಜನರು ನಿರಂತರವಾಗಿ ಒತ್ತಾಯಿಸುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಪ್ರಥಮ ಬಾರಿ ಶಾಸಕರಾಗಿ ಆಯ್ಕೆಯಾದ ನಮ್ಮ ಕ್ಷೇತ್ರಕ್ಕೆ ಮಳೆಹಾನಿ, ಕೃಷಿಹಾನಿ, ಸಮುದ್ರ ಕೊರೆತ, ಆಸ್ಪತ್ರೆ, ಶಾಲಾ ಕಟ್ಟಡ, ರಸ್ತೆಗಳ ದುರಸ್ಥಿ-ನಿರ್ಮಾಣ, ಕಾಲುಸಂಕ ಹಾಗೂ ಮೋರಿಗಳ ದುರಸ್ಥಿ, ನಿಮಾಣ, ನದಿ ದಂಡೆ ಸಂರಕ್ಷಣೆ ಹಾಗೂ ವಿದ್ಯುತ್-ಬೀದಿ ದೀಪಗಳ ಸೌಕರ್ಯ ಇತ್ಯಾದಿ ಸಮಸ್ಯೆಗಳಿಗೆ ಸ್ಪಂದಿಸಲು 2023-24 ಮತ್ತು 2024-25ನೇ ಸಾಲಿಗೆ ತಲಾ 50.00 ಕೋಟಿ ರೂ.ನಂತೆ ಒಟ್ಟಾರೆ 100 ಕೋಟಿ ರೂ. ವಿಶೇಷ ಅನುದಾನ ಮಂಜೂರು ಮಾಡಿಸಿ, ಕ್ಷೇತ್ರ ಅಭಿವೃದ್ಧಿಗೆ ಸಹಕರಿಸಬೇಕಾಗಿ ಕೋರುತ್ತೇವೆ ಎಂದು ಶಾಸಕರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

Verified by MonsterInsights