ನ್ಯೂಝಿಲೆಂಡ್ ತಂಡದ ನೂತನ ನಾಯಕನಾಗಿ ಮಿಚೆಲ್ ಸ್ಯಾಂಟ್ನರ್ ಆಯ್ಕೆಯಾಗಿದ್ದಾರೆ. ಈ ಬಾರಿಯ ಟಿ20 ವಿಶ್ವಕಪ್ ಸೋಲಿನ ಬಳಿಕ ನ್ಯೂಝಿಲೆಂಡ್ ತಂಡದ ನಾಯಕತ್ವಕ್ಕೆ ಕೇನ್ ವಿಲಿಯಮ್ಸನ್ ರಾಜೀನಾಮೆ ನೀಡಿದ್ದರು.

ವಿಲಿಯಮ್ಸನ್ ಅವರಿಂದ ತೆರವಾಗಿದ್ದ ಟೆಸ್ಟ್ ತಂಡದ ನಾಯಕನಾಗಿ ವಿಕೆಟ್ ಕೀಪರ್ ಬ್ಯಾಟರ್ ಟಾಮ್ ಲ್ಯಾಥಮ್ ಆಯ್ಕೆಯಾಗಿದ್ದರು. ಇದಾಗ್ಯೂ ಏಕದಿನ ಮತ್ತು ಟಿ20 ತಂಡಗಳಿಗೆ ನ್ಯೂಝಿಲೆಂಡ್ ಕ್ರಿಕೆಟ್ ಬೋರ್ಡ್ ಹೊಸ ನಾಯಕನನ್ನು ಘೋಷಿಸಿರಲಿಲ್ಲ.

ಇದೀಗ ಆಲ್​ರೌಂಡರ್ ಆಟಗಾರ ಮಿಚೆಲ್ ಸ್ಯಾಂಟ್ನರ್ ಅವರಿಗೆ ಸೀಮಿತ ಓವರ್​ಗಳ ತಂಡದ ಕ್ಯಾಪ್ಟನ್ ಪಟ್ಟ ಒಲಿದಿದೆ. ಅದರಂತೆ ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಿವೀಸ್ ಪಡೆ ಸ್ಯಾಂಟ್ನರ್ ಮುಂದಾಳತ್ವದಲ್ಲಿ ಕಣಕ್ಕಿಳಿಯಲಿದೆ. ಹಾಗೆಯೇ ಟಿ20 ವಿಶ್ವಕಪ್ 2026ರವರೆಗೆ ಅವರ ನಾಯಕತ್ವವನ್ನು ಮುಂದುವರೆಸಲು ನ್ಯೂಝಿಲೆಂಡ್ ಕ್ರಿಕೆಟ್ ಬೋರ್ಡ್ ನಿರ್ಧರಿಸಿದೆ.

ಅಂದಹಾಗೆ ಮಿಚೆಲ್ ಸ್ಯಾಂಟ್ನರ್ ನಾಯಕತ್ವದಲ್ಲಿ ನ್ಯೂಝಿಲೆಂಡ್ ತಂಡವು ಸ್ಯಾಂಟ್ನರ್ ಅವರು ಈ ಹಿಂದೆ 24 ಟಿ20 ಮತ್ತು 4 ಏಕದಿನ ಪಂದ್ಯಗಳಲ್ಲಿ ಹಂಗಾಮಿ ನಾಯಕರಾಗಿ ಕಾಣಿಸಿಕೊಂಡಿದ್ದರು. ಈ ವೇಳೆ ಒಟ್ಟು 14 ಟಿ20 ಪಂದ್ಯಗಳಲ್ಲಿ ನ್ಯೂಝಿಲೆಂಡ್ ತಂಡವು ಜಯ ಸಾಧಿಸಿದೆ.

ನ್ಯೂಝಿಲೆಂಡ್ ತಂಡವು ತನ್ನ ಮುಂದಿನ ಸರಣಿಯಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದ್ದು, ಈ ಟಿ20 ಸರಣಿಯು ಡಿಸೆಂಬರ್ 28 ರಿಂದ ಶುರುವಾಗಲಿದೆ. ಈ ಸರಣಿಯ ಮೂಲಕ ಮಿಚೆಲ್ ಸ್ಯಾಂಟ್ನರ್ ನ್ಯೂಝಿಲೆಂಡ್ ತಂಡದ ಪೂರ್ಣ ಪ್ರಮಾಣದ ನಾಯಕರಾಗಿ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ.

 

Leave a Reply

Your email address will not be published. Required fields are marked *

Verified by MonsterInsights