ರಾಜ್ಯಸುದ್ದಿ

ಸಚಿವ ಮಧು ಬಂಗಾರಪ್ಪ ಬರ್ತ್‌ಡೇ ಗಿಫ್ಟ್; ವಿದ್ಯಾರ್ಥಿಗಳಿಗೆ ಉಚಿತ ವಿಮಾನಯಾನ!

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ತಮ್ಮ ಜನ್ಮದಿನವನ್ನು ಅತ್ಯಂತ ವಿಭಿನ್ನ ಹಾಗೂ ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಗಮನ ಸೆಳೆದಿದ್ದಾರೆ. ತಾವು ಪ್ರತಿನಿಧಿಸುವ ಸೊರಬ ಕ್ಷೇತ್ರದ ಪೌರಕಾರ್ಮಿಕರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿಮಾನಯಾನದ ಅವಕಾಶ ಕಲ್ಪಿಸಿಕೊಡುವ ಮೂಲಕ ಅವರ ಕನಸನ್ನು ನನಸು ಮಾಡಿದ್ದಾರೆ.

ಪ್ರತಿನಿತ್ಯ ನಗರದ ಸ್ವಚ್ಛತೆಗಾಗಿ ಶ್ರಮಿಸುವ ಸೊರಬ ಪುರಸಭೆ ಮತ್ತು ಆನವಟ್ಟಿ ಪಟ್ಟಣ ಪಂಚಾಯಿತಿಯ 36 ಪೌರಕಾರ್ಮಿಕರು ಈ ವಿಶೇಷ ಪಯಣದ ಭಾಗವಾಗಿದ್ದರು. ಇವರೊಂದಿಗೆ ಸೊರಬ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಶೇ. 97ಕ್ಕಿಂತ ಹೆಚ್ಚು ಅಂಕ ಗಳಿಸಿದ 30 ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಸೇರಿದಂತೆ ಒಟ್ಟು 100ಕ್ಕೂ ಹೆಚ್ಚು ಜನರಿಗೆ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ವಿಮಾನಯಾನದ ಸೌಭಾಗ್ಯ ದೊರೆಯಿತು.

ಬಸ್ ಮತ್ತು ರೈಲುಗಳಲ್ಲಿ ಮಾತ್ರ ಪ್ರಯಾಣಿಸುತ್ತಿದ್ದ ಈ ಸಾಮಾನ್ಯ ಜನರಿಗೆ ಇಂಡಿಗೋ ವಿಮಾನದಲ್ಲಿ ಹಾರಾಡಿದ್ದು ಅವಿಸ್ಮರಣೀಯ ಅನುಭವ ನೀಡಿತು. ವಿಶೇಷವೆಂದರೆ, ಸಚಿವ ಮಧು ಬಂಗಾರಪ್ಪ ಅವರು ಕೂಡ ಖುದ್ದಾಗಿ ಈ ಪ್ರಯಾಣಿಕರೊಂದಿಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿ, ಅವರ ಸಂಭ್ರಮದಲ್ಲಿ ಭಾಗಿಯಾಗಿ ಹಿರಿಯ ಕಾಯಕಯೋಗಿಗಳು ಹಾಗೂ ಮಕ್ಕಳ ಮೊಗದಲ್ಲಿ ಮಂದಹಾಸ ಮೂಡಿಸಿದರು.

Comments (0)

Your email address will not be published. Required fields are marked *

Back to top button