ಬೆಂಗಳೂರು: ಸಚಿವ ಕೆ.ಜೆ. ಜಾರ್ಜ್ ಅವರ ರಾಜೀನಾಮೆ ವದಂತಿಗೆ ಈಗ ಅಧಿಕೃತ ತೆರೆ ಬಿದ್ದಿದೆ. ಕಲಾಪದ ವೇಳೆ ಸ್ವತಃ ಸಚಿವರೇ ಸ್ಪಷ್ಟನೆ ನೀಡುವ ಮೂಲಕ ಎಲ್ಲಾ ಊಹಾಪೋಹಗಳನ್ನು ತಳ್ಳಿಹಾಕಿದ್ದಾರೆ.
ಸಚಿವ ಜಾರ್ಜ್ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆ, ವಿಧಾನಸಭೆಯಲ್ಲಿ ಪ್ರತಿಪಕ್ಷ ಬಿಜೆಪಿ ನಾಯಕರು ಆರ್. ಅಶೋಕ್ ನೇತೃತ್ವದಲ್ಲಿ ಬಿಜೆಪಿ ಶಾಸಕರು ಈ ವಿಚಾರವನ್ನು ಅಸ್ತ್ರವಾಗಿಸಿಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಬಿಜೆಪಿ ಶಾಸಕ ಸುನಿಲ್ ಕುಮಾರ್ ವಿಷಯ ಪ್ರಸ್ತಾಪಿಸಿ, “ಮುಖ್ಯಮಂತ್ರಿಗಳ ಪುತ್ರನ ಹಸ್ತಕ್ಷೇಪ ಹೆಚ್ಚಾಗಿ ಸಚಿವರು ಬೇಸತ್ತಿದ್ದಾರೆಯೇ? ರಾಜ್ಯಕ್ಕೆ ಸತ್ಯ ತಿಳಿಯಲಿ, ಎಂದು ಒತ್ತಾಯಿಸಿದರು.
‘ನಾನು ರಾಜೀನಾಮೆ ನೀಡಿಲ್ಲ’ – ಜಾರ್ಜ್ ಸ್ಪಷ್ಟನೆ
ಪ್ರತಿಪಕ್ಷಗಳ ಕಾಲೆಳೆಯುವ ತಂತ್ರಕ್ಕೆ ಉತ್ತರಿಸಿದ ಸಚಿವ ಕೆ.ಜೆ. ಜಾರ್ಜ್, “ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಿಲ್ಲ. ಅದೆಲ್ಲವೂ ಸತ್ಯಕ್ಕೆ ದೂರವಾದ ಮಾತು. ಬಹುಶಃ ಮಾಧ್ಯಮಗಳೇ ಇಂತಹ ಊಹಾಪೋಹಗಳನ್ನು ಸೃಷ್ಟಿಸಿರಬಹುದು,” ಎಂದು ಕಿಡಿಕಾರಿದರು.
ಮುಖ್ಯಮಂತ್ರಿಗಳ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ. ಹಸ್ತಕ್ಷೇಪದ ಮಾತುಗಳಲ್ಲಿ ಯಾವುದೇ ಹುರುಳಿಲ್ಲ. ನಾವು ನಂಬಿಕೆ ಮತ್ತು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ, ಎಂದು ಸಚಿವರು ಪಕ್ಷದೊಳಗಿನ ಭಿನ್ನಮತದ ಸುದ್ದಿಗೆ ಸ್ಪಷ್ಟನೆ ನೀಡಿದ್ದಾರೆ..


