ಸಚಿವ ಜಮೀರ್ ಅಹಮದ್ ಖಾನ್ ಗೆ ಸಂಬಂಧಿಸಿದ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಲೋಕಾಯುಕ್ತ ತನಿಖೆ ಚುರುಕುಗೊಂಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಸಚಿವರಿಗೆ ಕೋಟಿ ಕೋಟಿ ಹಣ ನೀಡಿದ ಆರೋಪ ಎದುರಿಸುತ್ತಿರುವ ಉದ್ಯಮಿ ಹಾಗೂ ಮಾಜಿ ಕಾಂಗ್ರೆಸ್ ಮುಖಂಡ ಕೆ.ಜಿ.ಎಫ್ ಬಾಬು ಇಂದು ಲೋಕಾಯುಕ್ತ ವಿಚಾರಣೆಗೆ ಹಾಜರಾಗಿದ್ದಾರೆ.

ಜಮೀರ್ ಅಹಮದ್ ಖಾನ್ ಅವರ ಮೇಲೆ ಈ ಹಿಂದೆ ಎಸಿಬಿ ದಾಖಲಿಸಿದ್ದ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತನಿಖೆಯನ್ನು ಈಗ ಲೋಕಾಯುಕ್ತ ಮುಂದುವರಿಸಿದೆ. ಈ ತನಿಖೆಯ ವೇಳೆ ಜಮೀರ್ ಅವರಿಗೆ ಕೆ.ಜಿ.ಎಫ್ ಬಾಬು ಸುಮಾರು 4 ಕೋಟಿ ರೂಪಾಯಿ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಣದ ವ್ಯವಹಾರದ ಮೂಲ ಹಾಗೂ ಉದ್ದೇಶದ ಬಗ್ಗೆ ಸ್ಪಷ್ಟತೆ ಪಡೆಯಲು ಲೋಕಾಯುಕ್ತ ಅಧಿಕಾರಿಗಳು ಬಾಬು ಅವರಿಗೆ ನೋಟಿಸ್ ಜಾರಿ ಮಾಡಿದ್ದರು.
ಈಗಾಗಲೇ ಮಾಧ್ಯಮಗಳ ಮುಂದೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆ.ಜಿ.ಎಫ್ ಬಾಬು, “ನಾನು ಸಚಿವ ಜಮೀರ್ ಅಹಮದ್ ಅವರಿಂದ ಸಾಲ ಪಡೆದಿದ್ದೆ, ಆ ಹಣವನ್ನು ಮರುಪಾವತಿ ಮಾಡಿದ್ದೇನೆ ಅಷ್ಟೆ. ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ” ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಆದಾಗ್ಯೂ, ತನಿಖಾಧಿಕಾರಿಗಳು ಈ ಹಣಕಾಸಿನ ವಹಿವಾಟಿನ ದಾಖಲೆಗಳನ್ನು ಪರಿಶೀಲಿಸಲು ಮುಂದಾಗಿದ್ದು, ಇಂದು ಬಾಬು ನೀಡುವ ಹೇಳಿಕೆ ಸಚಿವ ಜಮೀರ್ ಅವರಿಗೆ ನುಂಗಲಾರದ ತುತ್ತಾಗುವ ಸಾಧ್ಯತೆಯಿದೆ.


