ರಾಜಕೀಯರಾಜ್ಯಸುದ್ದಿ

ಬಿಜೆಪಿಯ ‘ಚೊಂಬು’ ಪ್ರದರ್ಶನಕ್ಕೆ ಸಚಿವ ಭೋಸರಾಜು ಖಡಕ್ ಟಾಂಗ್!

ಕಲಬುರ್ಗಿ: ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಕುರ್ಚಿ ಬದಲಾವಣೆಯ ಕುರಿತು ಕೇಳಿಬರುತ್ತಿರುವ ವದಂತಿಗಳನ್ನು ಸಣ್ಣ ನೀರಾವರಿ ಸಚಿವ ಎನ್.ಎಸ್. ಭೋಸರಾಜು ಯಲ್ಲಿ ತೀವ್ರವಾಗಿ ಅಲ್ಲಗಳೆದಿದ್ದಾರೆ. ಸಿಎಂ ಬದಲಾವಣೆಯ ಫೈಟ್ ತಾರಕಕ್ಕೇರಿದೆ ಎಂಬ ಮಾತುಗಳು ಕೇವಲ ಊಹಾಪೋಹಗಳಾಗಿದ್ದು, ನಾವೆಲ್ಲರೂ ಹೈಕಮಾಂಡ್ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದ್ದೇವೆ, ಸ್ವತಃ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೂಡ ಇದೇ ನಿಲುವನ್ನು ಹೊಂದಿದ್ದು, ಪಕ್ಷದ ಕಾರ್ಯಕರ್ತರು ಅಥವಾ ನಾಯಕರು ಸಿಎಂ ಬದಲಾವಣೆಯ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಹೇಳಿಕೆಗಳನ್ನು ನೀಡಬಾರದು ಎಂದು ಕಿವಿಮಾತು ಹೇಳಿದ್ದಾರೆ.

ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ ಸಚಿವರು, ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ “ಸರ್ಕಾರ ಬೀಳುತ್ತದೆ” ಎನ್ನುವ ಸುಳ್ಳು ಸುದ್ದಿಯನ್ನು ಬಿಜೆಪಿಗರು ಹಬ್ಬಿಸುತ್ತಲೇ ಬಂದಿದ್ದಾರೆ, ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದ್ದು, ವಿರೋಧ ಪಕ್ಷದವರು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದ ಅಭಿವೃದ್ಧಿಗಿಂತ ಹೆಚ್ಚಾಗಿ ಸರ್ಕಾರಕ್ಕೆ ಮುಜುಗರ ತರುವಂತಹ ವಿಚಾರಗಳಲ್ಲೇ ಬಿಜೆಪಿ ತೊಡಗಿಸಿಕೊಂಡಿದೆ ಎಂಬುದು ಭೋಸರಾಜು ಅವರ ವಾದವಾಗಿದೆ.

ಬಜೆಟ್ ಅಧಿವೇಶನದ ವೇಳೆ ಬಿಜೆಪಿ ಪ್ರದರ್ಶಿಸಿದ ‘ಖಾಲಿ ಚೊಂಬು’ ಅಭಿಯಾನಕ್ಕೆ ತಿರುಗೇಟು ನೀಡಿದ ಭೋಸರಾಜು, ಬಿಜೆಪಿಯವರಿಗೆ ಮಾಡಲು ಬೇರೆ ಕೆಲಸವೇ ಇಲ್ಲ ಎಂದು ಲೇವಡಿ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ಅತ್ಯಂತ ಜನಪರವಾಗಿದ್ದು, ಎಲ್ಲ ವರ್ಗದವರ ಹಿತರಕ್ಷಣೆ ಮಾಡುವ ಉದ್ದೇಶ ಹೊಂದಿದೆ. ಇದನ್ನು ಸಹಿಸದ ಬಿಜೆಪಿಗರು ಕೇವಲ ರಾಜಕೀಯ ಲಾಭಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುಖ್ಯಮಂತ್ರಿಯವರನ್ನು ಬಿಜೆಪಿ ನಾಯಕರು ‘ಸಾಲದ ರಾಮಯ್ಯ’ ಎಂದು ಕರೆಯುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವರು, ಕಳೆದ 12 ವರ್ಷಗಳಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ದೇಶಕ್ಕಾಗಿ ಮಾಡಿರುವ ಸಾಲ ಎಷ್ಟು ಎಂಬ ಬಗ್ಗೆ ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಸವಾಲು ಹಾಕಿದ್ದಾರೆ. ರಾಜ್ಯದ ಆರ್ಥಿಕ ಶಕ್ತಿಯ ಬಗ್ಗೆ ಹೆಮ್ಮೆಯಿಂದ ಮಾತನಾಡಿದ ಅವರು, ದೇಶದ ತಲಾ ಆದಾಯದಲ್ಲಿ ಕರ್ನಾಟಕ ನಂಬರ್ 1 ಸ್ಥಾನದಲ್ಲಿದೆ ಹಾಗೂ ಜಿಎಸ್‌ಟಿ ಪಾವತಿಯಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದೆ. ಇಷ್ಟೊಂದು ಬಲಿಷ್ಠ ಆರ್ಥಿಕತೆ ಹೊಂದಿರುವ ರಾಜ್ಯಕ್ಕೆ ಸಿದ್ದರಾಮಯ್ಯ ಅವರು ದಾಖಲೆಯ ಬಜೆಟ್ ನೀಡಿದ್ದಾರೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

Comments (0)

Your email address will not be published. Required fields are marked *

Back to top button