ವಿಜಯಪುರ : ವಿಜಯಪುರ ಎಪಿಎಂಸಿಯಲ್ಲಿ ಹಲವಾರು ವರ್ಷಗಳಿಂದ ಲಿಂಬೆ ವ್ಯಾಪಾರದಲ್ಲಿ ದಲ್ಲಾಳಿಗಳು ಅಡ್ವಾನ್ಸ್ ಹೆಸರಿನಲ್ಲಿ ಪ್ರತಿ ರೈತರಿಂದ 10% ಕಮಿಷನ್ ಪಡೆಯುತ್ತಿದ್ದು, ಇದರಿಂದ ರೈತರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ನಮ್ಮ ಜಿಲ್ಲೆಯವರೇ ಆಗಿರುವ ಎಪಿಎಂಸಿ ಸಚಿವ ಶಿವಾನಂದ ಪಾಟೀಲರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಇದನ್ನು ಕೂಡಲೇ ತನಿಖೆಗೊಳಪಡಿಸಿ ಎಪಿಎಂಸಿಯಲ್ಲಿನ ಕಮಿಷನ್ ಹಾವಳಿ ತಡೆದು ರೈತರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.
ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಶಂಕರಗೌಡ ಹಿರೇಗೌಡರ ಮಾತನಾಡಿ, ವಿಜಯಪುರ ಎಪಿಎಂಸಿಗೆ ಮಾರಾಟಕ್ಕಾಗಿ ಆಗಮಿಸುವ ಲಿಂಬೆ ರೈತರಿಗೆ ಇಲ್ಲಿನ ದಲ್ಲಾಳಿಗಳು ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ 10% ಕಮಿಷನ್ ಪಡೆಯುತ್ತಿದ್ದಾರೆ. ಲಿಲಾವು ವೇಳೆ ರೈತರಿಗೆ ವಾಸ್ತವವಾಗಿ ಯಾವುದೇ ಮುಂಗಡ ಹಣ ಕೊಡದೇ ರಸೀದಿಯಲ್ಲಿ “ಅಡ್ವಾನ್ಸ್” ಅಥವಾ “ರೋಖ” ಎಂದು ನಮೂದಿಸಿ 10% ಹೆಚ್ಚುವರಿ ಹಣ ಕಡಿತ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ ಕೂಲಿ ದರ ಹಾಗೂ ಇತರೆ ವೆಚ್ಚಗಳನ್ನು ಸಹ ರೈತರ ಮೇಲೆಯೇ ಹಾಕುತ್ತಿದ್ದಾರೆ. ಸರ್ಕಾರದ ನಿಯಮದಂತೆ ಎಪಿಎಂಸಿಯಲ್ಲಿ ರೈತರಿಂದ ಯಾವುದೇ ಕಮಿಷನ್ ಪಡೆಯುವಂತಿಲ್ಲ, ಅಲ್ಲದೇ ವ್ಯಾಪಾರಸ್ಥರಿಗೆ ಟ್ರೇಡರ್ಸ್ ಗಳಿಂದ ಕನಿಷ್ಠ 5%, ಕಮಿಷನ್ ಸಿಗುತ್ತದೆ. ಹಾಗಿದ್ದರೂ ದಲ್ಲಾಳಿಗಳು ರಾಜರೋಷವಾಗಿ ರೈತರಿಂದ ಕಮಿಷನ್ ಪಡೆಯುತ್ತಿದ್ದು ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದರು.
ವಿಜಯಪುರ ಎಪಿಎಂಸಿಯಲ್ಲಿ ಪ್ರತಿ ಬುಧವಾರ, ಭಾನುವಾರ ಹಾಗೂ ಶುಕ್ರವಾರ ದೊಡ್ಡ ಪ್ರಮಾಣದಲ್ಲಿ ಲಿಂಬೆ ವ್ಯಾಪಾರ ನಡೆಯುತ್ತದೆ. ವಾರಕ್ಕೆ ಲಕ್ಷಾಂತರ ಲಿಂಬೆ ಡಾಗ್ ಗಳು (ಚೀಲಗಳು) ಇಲ್ಲಿ ವ್ಯಾಪಾರವಾಗುತ್ತವೆ. ಇಲ್ಲಿ ಕಮಿಷನ್ ದಂಧೆ ದೊಡ್ಡ ಪ್ರಮಾಣದಲ್ಲಿ ಬೇರೂರಿದೆ. ಕಮಿಷನ್ ಹಾವಳಿ ಕುರಿತು ರೈತರು ಈ ಹಿಂದೆ ಜಿಲ್ಲಾಧಿಕಾರಿಗಳು ಹಾಗೂ ಎಪಿಎಂಸಿ ಅಧಿಕಾರಿಗಳಿಗೆ ಸಾಕಷ್ಟು ಸಲ ದೂರುಗಳನ್ನು ನೀಡಿದ್ದರೂ ಇಲ್ಲಿವರೆಗೂ ಯಾವುದೇ ಕ್ರಮವಹಿಸಿಲ್ಲ. ಸದ್ಯ ಎಪಿಎಂಸಿ ಕಾರ್ಯದರ್ಶಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ದಲ್ಲಾಳಿಗಳು ನೀಡಿರುವ ರಸೀದಿಗಳ ಮೂಲಕ ಸಾಕ್ಷಿ ಸಮೇತ ಮನವಿ ಪತ್ರ ಸಲ್ಲಿಸಿದ್ದೇವೆ. ಕೂಡಲೇ ಸಚಿವರು, ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ಎಪಿಎಂಸಿಯಲ್ಲಿ ಕಮಿಷನ್ ಹಾವಳಿ ತಡೆಗಟ್ಟಬೇಕೆಂದು ರೈತ ಸಂಘದ ಅಧ್ಯಕ್ಷ ಶಂಕರಗೌಡ ಹಿರೇಗೌಡರ ಆಗ್ರಹಿಸಿದರು.
ನಾವು ಕಷ್ಟಪಟ್ಟು ಬೆಳೆದ ಲಿಂಬೆಯನ್ನು ಮಾರಾಟ ಮಾಡಲು ಎಪಿಎಂಸಿಗೆ ತಂದಾಗ ಇಲ್ಲಿನ ದಲ್ಲಾಳಿಗಳು ನಮಗೆ ಯಾವುದೇ ಮುಂಗಡ ಹಣ ನೀಡದೇ ಒಟ್ಟು ಮೊತ್ತದಲ್ಲಿ10% ಕಮಿಷನ್ ಪಡೆಯುತ್ತಿದ್ದಾರೆ. ರಸೀದಿಯಲ್ಲಿ ಅಡ್ವಾನ್ಸ್ ಅಥವಾ ರೋಖ ಎಂದು ಬರೆದು ಹಣ ಕಡಿತ ಮಾಡಿಕೊಂಡು ಯಾವುದೇ ಅಧಿಕೃತ ಸಹಿ ಇಲ್ಲದ ಅನಧಿಕೃತ ರಸೀದಿಗಳನ್ನು ನೀಡುತ್ತಾರೆ. ಇದೆಲ್ಲಾ ಎಪಿಎಂಸಿ ಅಧಿಕಾರಿಗಳ ಕಣ್ಮುಂದಯೇ ನಡೆಯುತ್ತಿದ್ದರೂ ಅಧಿಕಾರಿಗಳು ಏನೂ ಕ್ರಮ ಕೈಗೊಳ್ಳುವುದಿಲ್ಲ. ಈ ಕಮಿಷನ್ ದಂಧೆಯಲ್ಲಿ ಪರೋಕ್ಷವಾಗಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಸಂಶಯ ಮೂಡಿಸಿದೆ. ಬರಗಾಲದಲ್ಲೂ ಹೇಗೋ ಕಷ್ಟಪಟ್ಟು ಬೆಳೆದರೂ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಇಂತಹ ದುಸ್ಥಿತಿಯಲ್ಲಿ ದಲ್ಲಾಳಿಗಳ ಕಮಿಷನ್ ಹಾವಳಿ ನಮಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಆಳುವ ಸರ್ಕಾರಗಳು, ಪಕ್ಷಗಳಿಗೆ ರೈತರು ಕೇವಲ ಭಾಷಣದ ವಸ್ತುವಾಗಿದ್ದೇವೆ. ವಾಸ್ತವವಾಗಿ ರೈತರ ಗೋಳು, ಸಂಕಷ್ಟಗಳನ್ನು ಯಾರೂ ಕೇಳುತ್ತಿಲ್ಲ. ರೈತನಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿಲ್ಲ ಎಂದು ಕಡ್ಲೇವಾಡದ ಲಿಂಬೆ ಬೆಳೆಗಾರರಾದ ಸಾಹೇಬಗೌಡ ರೆಡ್ಡಿ ಹಾಗೂ ನಿಂಗರಾಯ ತುಕ್ಕಪ್ಪ ಅವರು ಎಪಿಎಂಸಿಯ ಕಮಿಷನ್ ದಂಧೆಗೆ ಬೇಸರ ವ್ಯಕ್ತಪಡಿಸಿದರು.