ದಾವಣಗೆರೆ: ಎಂಸಿಸಿ ಬಿ ಬ್ಲಾಕ್ನಲ್ಲಿರುವ ಖಾಸಗಿ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ನಲ್ಲಿ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ವರದಿಯಾಗಿದೆ. ಮಹಾರಾಷ್ಟ್ರದ ಸತಾರ್ ಜಿಲ್ಲೆಯ ಕರಾಡ್ ನಿವಾಸಿ ಸಿದ್ಧಾರ್ಥ ತ್ರಯಂಬಕೆ (30) ಮೃತಪಟ್ಟ ದುರ್ದೈವಿ. ಇಲ್ಲಿನ ಕಾಲೇಜಿನಲ್ಲಿ ಡರ್ಮಾಟಾಲಾಜಿ ವಿಭಾಗದಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಸಿದ್ಧಾರ್ಥ ಅವರು ನೆಲೆಸಿದ್ದ ಇಂಟರ್ನ್ಯಾಷನಲ್ ಹಾಸ್ಟೆಲ್ನ ಕೊಠಡಿಯು ನಿನ್ನೆ ಮಧ್ಯಾಹ್ನದಿಂದ ಒಳಗಿನಿಂದ ಲಾಕ್ ಆಗಿತ್ತು. ಎಷ್ಟೇ ಹೊತ್ತಾದರೂ ವಿದ್ಯಾರ್ಥಿ ಹೊರಬರದ ಹಿನ್ನೆಲೆಯಲ್ಲಿ ಅನುಮಾನಗೊಂಡ ಇತರರು ಮತ್ತು ಸಿಬ್ಬಂದಿ ಬಾಗಿಲು ಒಡೆದು ಒಳಗೆ ಹೋದಾಗ ಆತ್ಮಹತ್ಯೆಯ ವಿಚಾರ ಬೆಳಕಿಗೆ ಬಂದಿದೆ. ವೈದ್ಯಕೀಯ ವಿದ್ಯಾರ್ಥಿಯಾದ ಇವರು ಹಾನಿಕಾರಕ ಇಂಜೆಕ್ಷನ್ ಚುಚ್ಚಿಕೊಳ್ಳುವ ಮೂಲಕ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಸ್ಥಳಕ್ಕೆ ಭೇಟಿ ನೀಡಿದ ಬಡಾವಣೆ ಪೊಲೀಸ್ ಠಾಣೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿದ್ಯಾರ್ಥಿಯ ಈ ಹಠಾತ್ ನಿರ್ಧಾರಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಮಹಾರಾಷ್ಟ್ರದಲ್ಲಿರುವ ಸಿದ್ಧಾರ್ಥ ಅವರ ಪೋಷಕರಿಗೆ ಮಾಹಿತಿ ನೀಡಿದ್ದು, ಅವರು ದಾವಣಗೆರೆಗೆ ಆಗಮಿಸಿದ ನಂತರ ಹೆಚ್ಚಿನ ವಿವರಗಳು ಲಭ್ಯವಾಗುವ ಸಾಧ್ಯತೆಯಿದೆ.


