Monday, January 26, 2026
21.1 C
Bengaluru
Google search engine
LIVE
ಮನೆದೇಶ/ವಿದೇಶಕೇಂದ್ರದ ವಿರುದ್ಧ ನಾಳೆ ಬೆಂಗಳೂರಿನಲ್ಲಿ 'ರಾಜಭವನ ಚಲೋ' ಬೃಹತ್ ಪ್ರತಿಭಟನೆ

ಕೇಂದ್ರದ ವಿರುದ್ಧ ನಾಳೆ ಬೆಂಗಳೂರಿನಲ್ಲಿ ‘ರಾಜಭವನ ಚಲೋ’ ಬೃಹತ್ ಪ್ರತಿಭಟನೆ

ಬೆಂಗಳೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (MGNAREGA) ರದ್ದು ಹಾಗೂ ಅದರ ಬದಲಿಗೆ ಕೇಂದ್ರ ಸರ್ಕಾರ ತಂದಿರುವ ನೂತನ ಕಾಯ್ದೆಯನ್ನು ಖಂಡಿಸಿ ರಾಜ್ಯ ಕಾಂಗ್ರೆಸ್ ಸರ್ಕಾರ ಕೇಂದ್ರದ ವಿರುದ್ಧ ನೇರ ಸಮರ ಸಾರಿದೆ. ಇದರ ಭಾಗವಾಗಿ ನಾಳೆ ರಾಜಧಾನಿ ಬೆಂಗಳೂರಿನಲ್ಲಿ ‘ರಾಜಭವನ ಚಲೋ’ ಹಮ್ಮಿಕೊಳ್ಳಲಾಗಿದ್ದು, ಕೆಪಿಸಿಸಿ ಬೃಹತ್ ಪ್ರತಿಭಟನೆಗೆ ಸಜ್ಜಾಗಿದೆ.

ಫ್ರೀಡಂ ಪಾರ್ಕ್‌ನಿಂದ ರಾಜಭವನ ಮುತ್ತಿಗೆ

ಕೇಂದ್ರ ಸರ್ಕಾರ ಮನರೇಗಾ ಯೋಜನೆಯನ್ನು ಸಂಪೂರ್ಣವಾಗಿ ಬದಲಿಸಿ ಜಾರಿಗೆ ತಂದಿರುವ ʻವಿಬಿ ಜಿ ರಾಮ್ ಜಿʼ (VB-GRAMG) ಕಾಯ್ದೆಯು ಬಡವರ ವಿರೋಧಿಯಾಗಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಆರಂಭವಾಗಿ, ಅಲ್ಲಿಂದ ರಾಜಭವನಕ್ಕೆ ಮುತ್ತಿಗೆ ಹಾಕಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎಐಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಸೇರಿದಂತೆ ಸಚಿವರು ಹಾಗೂ ಸಾವಿರಾರು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.

ವಿಧಾನಸಭೆಯಲ್ಲಿ ವಿಶೇಷ ಅಧಿವೇಶನ: ಖಂಡನಾ ನಿರ್ಣಯಕ್ಕೆ ಸಿದ್ಧತೆ

ಹೋರಾಟದ ಜೊತೆಗೆ ಸದನದಲ್ಲೂ ಕೇಂದ್ರಕ್ಕೆ ತಿರುಗೇಟು ನೀಡಲು ಸರ್ಕಾರ ಮುಂದಾಗಿದೆ. ಇದೇ ಕಾರಣಕ್ಕಾಗಿ ಜನವರಿ 29, 30 ಮತ್ತು 31 ರಂದು ಮೂರು ದಿನಗಳ ಕಾಲ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಲಾಗಿದೆ. ಈ ಅಧಿವೇಶನದಲ್ಲಿ ಸಂಪೂರ್ಣವಾಗಿ ಮನರೇಗಾ ಬದಲಾವಣೆ ಕುರಿತು ವಿಸ್ತೃತ ಚರ್ಚೆ ನಡೆಸಿ, ಕೇಂದ್ರದ ಹೊಸ ಕಾಯ್ದೆ ವಿರುದ್ಧ ‘ಖಂಡನಾ ನಿರ್ಣಯ’ ಅಂಗೀಕರಿಸಲು ನಿರ್ಧರಿಸಲಾಗಿದೆ.

ಕೇಂದ್ರದ ವಿರುದ್ಧ ಹರಿಹಾಯ್ದಿರುವ ಸಚಿವ ಕೃಷ್ಣ ಬೈರೇಗೌಡ ಅವರು, “ಕೇಂದ್ರ ಸರ್ಕಾರ ಮನರೇಗಾ ಯೋಜನೆಯನ್ನು ಬುಡಮೇಲು ಮಾಡುವ ಮೂಲಕ ಗ್ರಾಮೀಣ ಬಡವರ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಬಡವರಿಗೆ ಅನುಕೂಲವಾಗುತ್ತಿದ್ದ ಯೋಜನೆಯನ್ನು ರದ್ದುಗೊಳಿಸಿರುವುದು ಅಕ್ಷಮ್ಯ,” ಎಂದು ವಾಗ್ದಾಳಿ ನಡೆಸಿದ್ದಾರೆ. ಇನ್ನು ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ವಾಪಸ್ ಪಡೆಯುವವರೆಗೆ ರಾಜ್ಯಾದ್ಯಂತ ಹಂತ ಹಂತವಾಗಿ ಹೋರಾಟವನ್ನು ತೀವ್ರಗೊಳಿಸಲು ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments