ಸಿನಿಮಾ

ಮೊದಲ ಹಂತದ ಚಿತ್ರೀಕರಣ ಮುಗಿಸಿದ ‘ಮ್ಯಾರೇಜ್ ಪಾರ್ಟಿ’!

ರೂಪೇಶ್ ಶೆಟ್ಟಿ ನಾಯಕನಾಗಿ ನಟಿಸಿದ್ದ ಅಧಿಪತ್ರ ಚಿತ್ರದ ಮೂಲಕ ನಿರ್ದೇಶನಾಗಿ ಗಮನ ಸೆಳೆದಿದ್ದವರು ಚಯನ್ ಶೆಟ್ಟಿ. ಚೊಚ್ಚಲ ಚಿತ್ರಕ್ಕೆ ಸಿಕ್ಕ ಸಕಾರಾತ್ಮಕ ಪ್ರತಿಕ್ರಿಯೆಗಳ ನಂತರ ಚಯನ್ ಸಂಪೂರ್ಣ ಮನೋರಂಜನಾತ್ಮಕ ಕಥೆಯೊಂದಿಗೆ `ಮ್ಯಾರೇಜ್ ಪಾರ್ಟಿ’ ಎಂಬ ಚಿತ್ರದ ಸಾರಥ್ಯ ವಹಿಸಿಕೊಂಡಿದ್ದಾರೆ. ಇದೀಗ ಸದ್ದುಗದ್ದಲವಿಲ್ಲದೆ ಮ್ಯಾರೇಜ್ ಪಾರ್ಟಿಯ ಮೊದಲ ಹಂತದ ಚಿತ್ರೀಕರಣ ಮುಗಿದಿದೆ.

ಮ್ಯಾರೇಜ್ ಪಾರ್ಟಿ ಹಾಸ್ಯಪ್ರಧಾನ ಸಿನಿಮಾ. ಗಟ್ಟಿ ಕಥೆಯೊಂದಿಗೆ ಪ್ರತೀ ಹಂತದಲ್ಲಿಯೂ ಕಚಗುಳಿಯಿಡುವ ಕಾಮಿಡಿಯ ಮೂಲಕ ಈ ಚಿತ್ರವನ್ನು ಕಟ್ಟಿ ಕೊಡಲು ಚಯನ್ ಮುಂದಾಗಿದ್ದಾರೆ. ಒಂದೂರಿನಲ್ಲಿ ಘಟಿಸುವ ಕಥೆ ಹೊಂದಿದುವ ಮ್ಯಾರೇಜ್ ಪಾರ್ಟಿಯ ಚಿತ್ರೀಕರಣ ಕುಂದಾಪುರದ ಲೊಕೇಷನ್ನುಗಳಲ್ಲಿ ನಡೆದಿದೆ. ಈಗಾಗಲೇ ಮೊದಲ ಹಂತದಲ್ಲಿ ಇಪ್ಪತ್ತು ದಿನಗಳ ಕಾಲ ಚಿತ್ರೀಕರಣ ನಡೆಸಿರುವ ಚಿತ್ರತಂಡ, ಎರಡನೇ ಹಂತದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದೆ.

ಈ ಚಿತ್ರದಲ್ಲಿ ವಿನೀತ್ ಕುಮಾರ್ ನಾಯಕನಾಗಿ ನಟಿಸುತ್ತಿದ್ದಾರೆ. ಈಗಾಗಲೇ ಹಲವಾರು ತುಳು ಸಿನಿಮಾಗಳಲ್ಲಿ ನಟಿಸುವ ಮೂಲಕ ಪ್ರೇಕ್ಷಕರನ್ನು ಸೆಳೆದಿರುವ ವಿನೀತ್ ಮ್ಯಾರೇಜ್ ಪಾರ್ಟಿ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಮೂಲತಃ ಕುಂದಾಪುರದವರೇ ಆಗಿರುವ ನಿರ್ದೇಶಕ ಚಯನ್ ಶೆಟ್ಟಿ ತಮ್ಮೂರಿನಲ್ಲಿ ನಡೆಯುವ ಮಜವಾದ ಕಥೆಯೊಂದನ್ನು ಮ್ಯಾರೇಜ್ ಸ್ಟೋರಿ ಮೂಲಕ ದೃಷ್ಯವಾಗಿಸುವ ಹಾದಿಯಲ್ಲಿದ್ದಾರೆ.

ವರಾಹಿ ಫಿಲಂಸ್ ಬ್ಯಾನರಿನಡಿಯಲ್ಲಿ ಸಂತೋಷ್. ವಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸಂತೋಷ್ ಅವರ ಪಾಲಿಗಿದು ನಿರ್ಮಾಪಕರಾಗಿ ಮೊದಲ ಹೆಜ್ಜೆ. ಇನ್ನುಳಿದಂತೆ, ಶ್ರೀಕಾಂತ್ ಛಾಯಾಗ್ರಹಣ, ರಿತ್ವಿಕ್ ಮುರಳೀಧರ್ ಸಂಗೀತ, ಸು ಫ್ರಂ ಸೋ ಖ್ಯಾತಿಯ ನಿತಿನ್ ಶೆಟ್ಟಿ ಸಂಕಲನ, ಪ್ರಮೋದ್ ಮರವಂತೆ ಮತ್ತು ತ್ರಿಲೋಕ್ ಸಾಹಿತ್ಯ, ಪ್ರಕಾಶ್ ತುಮಿನಾಡು, ದೀಪಕ್ ರೈ, ನವೀನ್ ಡಿ ಪಡೀಲ್, ರಕ್ಷಿತಾ, ನಮಿತಾ ಕಿರಣ್, ರಾಮ್‌ದಾಸ್, ರಘು ಪಾಂಡೇಶ್ವರ, ಪುಷ್ಪರಾಜ್ ಬೋಳಾರ್ ಮುಂತಾದವರ ತಾರಾಗಣವಿರುವ ಈ ಚಿತ್ರ ಕನ್ನಡ ಮತ್ತು ಮಲೆಯಾಳಂ ಭಾಷೆಗಳಲ್ಲಿ ಮೂಡಿ ಬರಲಿದೆ.

Comments (0)

Your email address will not be published. Required fields are marked *

Back to top button