22ಕ್ಕೆ ಮದುವೆ, 26ಕ್ಕೆ ಡಿವೋರ್ಸ್; ಸ್ಟಾರ್ ಕ್ರಿಕೆಟಿಗನ ಬಾಳಲ್ಲಿ ಬಿರುಗಾಳಿ!

ರಾಜಸ್ಥಾನ: ಸ್ಟಾರ್ ನಟ- ನಟಿಯರು, ಕ್ರಿಕೆಟರ್ಸ್ ಜೀವನದಲ್ಲಿ ವಿಚ್ಛೇದನ ಎಂಬುದು ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಕಳೆದ ಕೆಲ ತಿಂಗಳ ಹಿಂದೆಯಷ್ಟೇ ಯುಜ್ವೇಂದ್ರ ಚಾಹಲ್, ಹಾರ್ದಿಕ್ ಪಾಂಡ್ಯ, ಶಿಖರ್ ಧವನ್ ವಿಚ್ಛೇದನ ಪಡೆದುಕೊಂಡು ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದರು. ಇದರ ಬೆನ್ನಲ್ಲೇ ಇದೀಗ ಮತ್ತೋರ್ವ ಸ್ಟಾರ್ ಕ್ರಿಕೆಟಿಗ ಈ ಸಾಲಿಗೆ ಸೇರ್ಪಡೆಯಾಗಿದ್ದಾರೆ.
ಟೀಂ ಇಂಡಿಯಾದ ಯಂಗ್ ಲೆಗ್ ಸ್ಪಿನ್ನರ್ ರಾಹುಲ್ ಚಹರ್ ತಮ್ಮ ಪತ್ನಿಗೆ ಡಿವೋರ್ಸ್ ನೀಡಿದ್ದು, ಈ ಕುರಿತು ಖುದ್ದಾಗಿ ಇನ್‌ಸ್ಟಾಗ್ರಾಮ್ ನಲ್ಲಿ ಮಾಹಿತಿ ಶೇರ್ ಮಾಡಿಕೊಂಡಿದ್ದಾರೆ. ೨೦೨೨ರಲ್ಲಿ ಗೋವಾದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಸಿಎಸ್‌ಕೆ ತಂಡದ ಸ್ಟಾರ್ ಆಟಗಾರ ಮದುವೆಯಾದ ಕೇವಲ ೪ ವರ್ಷದಲ್ಲಿ ದಾಂಪತ್ಯ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ.

ಇನ್‌ಸ್ಟಾಗ್ರಾಮ್ ನಲ್ಲಿ ಬೇಸರ ಹೊರಹಾಕಿದ ಕ್ರಿಕೆಟರ್
ಕೇವಲ ೨೨ನೇ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಅವರು ಇದೀಗ ತಮ್ಮ ಪತ್ನಿ ಇಶಾನಿ ಜೋಹಾರ್‌ಗೆ ವಿಚ್ಛೇದನ ನೀಡಿರುವುದನ್ನು ಖಚಿತಪಡಿಸಿದ್ದು, ಇನ್‌ಸ್ಟಾಗ್ರಾಮ್ ನಲ್ಲಿ ಈ ರೀತಿಯಾಗಿ ಬರೆದುಕೊಂಡಿದ್ದಾರೆ. “ನಾನು ತುಂಬಾ ಚಿಕ್ಕ ವಯಸ್ಸಿನಲ್ಲೇ ಮದುವೆಯಾದೆ. ಆ ಸಮಯದಲ್ಲಿ ನನ್ನ ಜೀವನ ಹಾಗೂ ಮೌಲ್ಯವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲಾಗಲಿಲ್ಲ. ತದನಂತರದ ವರ್ಷಗಳು ನನಗೆ ಎಂದಿಗೂ ನಿರೀಕ್ಷೆ ಮಾಡದ ಪಾಠಗಳನ್ನು ಕಲಿಸಿವೆ. ಇದರ ಜೊತೆಗೆ ಕಳೆದ ೧೫ ತಿಂಗಳಗಳ ಕಾಲ ನಾನು ನ್ಯಾಯಾಲಯದ ಕೊಠಡಿಯಲ್ಲಿ ಸಮಯ ಕಳೆದಿದ್ದೇನೆ. ಈ ವೇಳೆ ತಾಳ್ಮೆ, ಸಹಿಷ್ಣುತೆ ಬಗ್ಗೆ ಪಾಠಗಳನ್ನು ಕಲಿತಿರುವೆ. ಇಂದಿಗೆ ನನ್ನ ಜೀವನದ ಆ ಕರಾಳ ಅಧ್ಯಾಯ ಅಧಿಕೃತವಾಗಿ ಕೊನೆಗೊಂಡಿದೆ. ಕಾನೂನು ಹೋರಾಟ ಸಹ ಅಂತಿಮವಾಗಿ ಬಗೆಹರಿದಿದೆ. ಕೆಲವು ಸಂಬಂಧಗಳು ಶಾಶ್ವತವಲ್ಲ. ಅವು ನಮ್ಮನ್ನು ಜಾಗೃತಗೊಳಿಸಲು, ಕಲಿಸಲು ಮತ್ತು ಪರಿವರ್ತಿಸಲು ಉದ್ದೇಶಿಸಿವೆ. ಈಗ, ನಾನು ಬುದ್ಧಿವಂತನಾಗಿದ್ದೇನೆ. ಮತ್ತಷ್ಟು ಉತ್ತಮ ಜೀವನ ರೂಪಿಸಲು ಜಾಗೃತನಾಗುವೆ“ ಎಂದು ಬರೆದುಕೊಂಡಿದ್ದಾರೆ.

ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಲು ಈಗಾಗಲೇ ಸಿದ್ಧತೆ ನಡೆಸಿರುವುದಾಗಿ ಹೇಳಿಕೊಂಡಿರುವ ಚಹರ್, ಉತ್ತಮ ಪ್ರದರ್ಶನದೊಂದಿಗೆ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡುವ ಇರಾದೆ ಇಟ್ಟುಕೊಂಡಿದ್ದಾರೆ. ೨೦೨೬ರ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಬರೋಬ್ಬರಿ ೫.೨೦ ಕೋಟಿ ನೀಡಿ ಚೆನ್ನೈ ಸೂಪರ್ ಕಿಂಗ್ಸ್ ಇವರನ್ನು ಖರೀದಿ ಮಾಡಿತ್ತು. ೨೦೧೯ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದ ಚಹರ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್, ಸನ್ ರೈಸರ್ಸ್‌ಹೈದರಾಬಾದ್ ಸೇರಿದಂತೆ ಅನೇಕ ತಂಡಗಳಲ್ಲಿ ಕಾಣಿಸಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ಇಲ್ಲಿಯವರೆಗೂ ಆಡಿರುವ ೭೯ ಪಂದ್ಯಗಳಿಂದ ೭೫ ವಿಕೆಟ್ ಪಡೆದುಕೊಂಡಿದ್ದಾರೆ. ಮುಂಬರುವ ಸೀಸನ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಟೀಮ್ ಇಂಡಿಯಾಗೆ ಮರಳುವ ವಿಶ್ವಾಸದಲ್ಲಿದ್ದಾರೆ.




