ಪ್ಯಾರಿಸ್: 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಈಗಾಗಲೇ ಪದಕ ಗೆದ್ದು ಇತಿಹಾಸ ನಿರ್ಮಿಸಿರುವ ಭಾರತದ ಯುವ ಶೂಟರ್ ಮನು ಭಾಕರ್ ಮತ್ತೊಂದು ಪದಕದ ಗುರಿಯಿಟ್ಟಿದ್ದಾರೆ. ಅವರು ಭಾಗವಹಿಸಿದ ಮೂರನೇ ಈವೆಂಟ್ನಲ್ಲಿ ಫೈನಲ್ ತಲುಪುವ ಮೂಲಕ ಭಾರತಕ್ಕೆ ಮತ್ತೊಂದು ಪದಕದ ಭರವಸೆ ನೀಡಿದ್ದಾರೆ. ಶುಕ್ರವಾರ ನಡೆದ ಮಹಿಳೆಯರ 25 ಮೀಟರ್ ಪಿಸ್ತೂಲ್ ಅರ್ಹತಾ ಸ್ಪರ್ಧೆಯಲ್ಲಿ ಅಗ್ರ 2ರಲ್ಲಿ ಸ್ಥಾನ ಪಡೆದು ಫೈನಲ್ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಈ ಈವೆಂಟ್ನಲ್ಲಿ ಗೆಲುವು ಸಾಧಿಸಿದರೆ ಒಂದೇ ಒಲಿಂಪಿಕ್ಸ್‌ನಲ್ಲಿ 3 ಪದಕ ಗೆದ್ದ ಭಾರತದ ಮೊದಲ ಕ್ರಿಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಹರಿಯಾಣದ 22 ವರ್ಷದ ಮನು ಭಾಕರ್ ಈಗಾಗಲೇ ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಮೊದಲನೇ ಪದಕವನ್ನು 10 ಮೀಟರ್ ಏರ್ ಪಿಸ್ತೂಲ್ ವೈಯಕ್ತಿಕ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಕಂಚು ಗೆದ್ದರು. ಈ ಪದಕದೊಂದಿಗೆ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ಲಭಿಸಿದೆ. ಇದಾದ ನಂತರ 10 ಮೀಟರ್ ಪಿಸ್ತೂಲ್ ಮಿಶ್ರ ಡಬಲ್ಸ್‌ನಲ್ಲಿ ಮತ್ತೊಬ್ಬ ಶೂಟರ್ ಸರಬ್ಜೋತ್ ಸಿಂಗ್ ಅವರೊಂದಿಗೆ ಮನು ಭಾಕರ್ ಕಂಚಿನ ಪದಕ ಗೆದ್ದರು. ಈ ಮೂಲಕ ಅವರು ಸ್ವಾತಂತ್ರ್ಯದ ನಂತರ ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯೆ ಎನಿಸಿಕೊಂಡಿದ್ದರು. ಇದೀಗ 3ನೇ ಪದಕ ಗೆದ್ದರೆ, ಮನು ಭಾಕರ್ ಅವರು ಒಂದೇ ಒಲಿಂಪಿಕ್ಸ್‌ನಲ್ಲಿ ಹ್ಯಾಟ್ರಿಕ್ ಪದಕಗಳನ್ನು ಗೆದ್ದ ಭಾರತವನ್ನು ಪ್ರತಿನಿಧಿಸಿ 3 ಪದಕ ಕ್ರೀಡಾಪಟು ಎನಿಸಿಕೊಳ್ಳಲಿದ್ದಾರೆ.