ಮಾಜಿ ಸಚಿವ, ಹಿರಿಯ ರಾಜಕಾರಣಿ ಮನೋಹರ್ ತಹಸೀಲ್ದಾರ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡರು. 50 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದ ಅವರು ಕಳೆದ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದ್ದರಿಂದ ಜೆಡಿಎಸ್ ಸೇರ್ಪಡೆಯಾಗಿದ್ದರು. ಈಗ ಅಲ್ಲಿಂದ ಬಿಜೆಪಿ ಸೇರಿದ್ದಾರೆ. ಈಗಾಗಲೇ ಲೋಕಸಭಾ ಚುನಾವಣೆಯ ತಯಾರಿಯಲ್ಲಿರುವ ಬಿಜೆಪಿ ಈ ಮೂಲಕ ಹಾವೇರಿ ಕ್ಷೇತ್ರವನ್ನು ಮತ್ತಷ್ಟು ಗಟ್ಟಿಗೊಳಿಸಲು ಮುಂದಾಗಿದೆ.
ಮಾಜಿ ಸಚಿವ ಮನೋಹರ್ ತಹಸೀಲ್ದಾರ್ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ ವಿಜಯೇಂದ್ರ ಅವರು ಪಕ್ಷದ ಧ್ವಜ ನೀಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷದ ನಾಯಕ ಆರ್. ಅಶೋಕ್ ಹಾಜರಿದ್ದರು.
50 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದ ಮಾಜಿ ಸಚಿವ ಮನೋಹರ ತಹಶೀಲ್ದಾರ್ ಅವರಿಗೆ ಕಳೆದ ಚುನಾವಣೆಯಲ್ಲಿ ಹಾನಗಲ್ ಟಿಕೆಟ್ ನೀಡಲು ಕಾಂಗ್ರೆಸ್ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಸಿಡಿದೆದ್ದಿದ್ದ ಮನೋಹರ್ ಅಲ್ಲಿಂದ ಜೆಡಿಎಸ್ ಸೇರ್ಪಡೆಯಾಗಿ ಸ್ಪರ್ಧೆ ಮಾಡಿದ್ದರು. ಅಲ್ಲದೆ, ಕಾಂಗ್ರೆಸ್ ತಮಗೆ ಅನ್ಯಾಯ ಮಾಡಿದೆ ಎಂದು ಬಹಿರಂಗ ಸಭೆಯಲ್ಲಿ ಕಣ್ಣೀರು ಹಾಕಿದ್ದರು. ಬಳಿಕ ನಡೆದ ಚುನಾವಣೆಯಲ್ಲಿ ಅವರು ಸೋಲು ಕಂಡಿದ್ದರು. ಆದರೆ, ಈಗ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವರ್ಚಸ್ಸುಳ್ಳ ನಾಯಕರನ್ನು ಸೆಳೆಯಲು ಬಿಜೆಪಿ ಮುಂದಾಗಿದೆ. ಈ ಕಾರಣದಿಂದ ಮನೋಹರ್ ತಹಸೀಲ್ದಾರ್ ಸೇರ್ಪಡೆ ಹಾವೇರಿ ಬಿಜೆಪಿ ಪಾಲಿಗೆ ಮುಖ್ಯವಾಗಿದೆ.
ಮನೋಹರ್ ತಹಸೀಲ್ದಾರ್ ಅವರು ರೈತರ ಪರ ಹಾಗೂ ನಾಗರಿಕ ಸ್ನೇಹಿ ನಾಯಕರಾಗಿದ್ದಲ್ಲದೆ, ಸಾಕಷ್ಟು ಜನಪ್ರಿಯತೆಯನ್ನು ಹೊಂದಿದ್ದರು. ಈ ಕಾರಣದಿಂದ ಅವರದ್ದೇ ಆದ ವೋಟ್ ಬ್ಯಾಂಕ್ ಇದೆ. ಅದೀಗ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ತರಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಮಾತುಕತೆಯ ಫಲವಾಗಿ ಮನೋಹರ್ ತಹಸೀಲ್ದಾರ್ ಅವರು ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ ಎಂದು ಹೇಳಲಾಗಿದೆ.