ಬೆಂಗಳೂರು: 77ನೇ ಗಣರಾಜ್ಯೋತ್ಸವ ದಿನಾಚರಣೆಗೆ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನ ಮಧುವಣಗಿತ್ತಿಯಂತೆ ಸಜ್ಜಾಗಿದೆ. ಈ ಬಾರಿ ಸಾರ್ವಜನಿಕರು ಸಮಾರಂಭವನ್ನು ಕಣ್ತುಂಬಿಕೊಳ್ಳಲು ವಿಶೇಷವಾಗಿ 2,000 ಇ-ಪಾಸ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಭದ್ರತೆಗಾಗಿ ರಾಜಧಾನಿಯಲ್ಲಿ ಪೊಲೀಸ್ ಪಡೆ ಹದ್ದಿನ ಕಣ್ಣಿಟ್ಟಿದೆ.
ಸಾರ್ವಜನಿಕರ ಅನುಕೂಲಕ್ಕಾಗಿ ಈ ಬಾರಿ ಆನ್‌ಲೈನ್ ಮೂಲಕ ಪ್ರವೇಶ ಪಾಸ್ ವಿತರಿಸಲಾಗುತ್ತಿದೆ. ಸೇವಾಸಿಂಧು (Seva Sindhu) ಪೋರ್ಟಲ್ ಮೂಲಕ ಇ-ಪಾಸ್‌ಗಳನ್ನು ಪಡೆದುಕೊಳ್ಳಬಹುದು. ಕಾರ್ಯಕ್ರಮಕ್ಕೆ ಬರುವವರು ಇ-ಪಾಸ್ ಅಥವಾ ಆಹ್ವಾನ ಪತ್ರಿಕೆಯೊಂದಿಗೆ ತಮ್ಮ ಅಧಿಕೃತ ಗುರುತಿನ ಚೀಟಿಯನ್ನು ತರುವುದು ಕಡ್ಡಾಯವಾಗಿದೆ.
77ನೇ ಗಣರಾಜ್ಯೋತ್ಸವ ಹಿನ್ನೆಲೆ ಜಿಬಿಎ ಕಮಿಷನರ್ ಮಹೇಶ್ವರ್ ರಾವ್ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಾರಿ ಆರ್ಮಿ, ಏರ್‌ಫೋರ್ಸ್, ಸಿಆರ್‌ಪಿಎಫ್ ಹಾಗೂ ವಿಶೇಷವಾಗಿ ತಮಿಳುನಾಡು ರಾಜ್ಯ ಪೊಲೀಸ್ ತುಕಡಿ ಸೇರಿದಂತೆ ಒಟ್ಟು 37 ತುಕಡಿಗಳು ಪಥಸಂಚಲನ ನಡೆಸಲಿವೆ. ವಿವಿಧ ಶಾಲೆಗಳ ಸುಮಾರು 1,400 ಮಕ್ಕಳು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿದ್ದಾರೆ.
ಮೈದಾನದ ಸುತ್ತಮುತ್ತ 100 ಸಿಸಿಟಿವಿ ಕ್ಯಾಮೆರಾಗಳು, 4 ಬ್ಯಾಗೇಜ್ ಸ್ಕ್ಯಾನರ್‌ಗಳು ಹಾಗೂ 2,000 ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಜನವರಿ 26ರಂದು ಬೆಳಿಗ್ಗೆ 8:30ರಿಂದ 10:30ರವರೆಗೆ ಕೆಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಕಬ್ಬನ್ ರಸ್ತೆಯ ಬಿಆರ್‌ವಿ ಜಂಕ್ಷನ್‌ನಿಂದ ಕಾಮರಾಜ ರಸ್ತೆ ಜಂಕ್ಷನ್‌ವರೆಗೆ ಸಂಚಾರ ಇರುವುದಿಲ್ಲ. ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆ ವೃತ್ತ, ಎಂಜಿ ರಸ್ತೆ ಮತ್ತು ಕ್ವೀನ್ಸ್ ಸರ್ಕಲ್ ಸುತ್ತಮುತ್ತ ಪಾರ್ಕಿಂಗ್ ನಿಷೇಧಿಸಲಾಗಿದೆ. ಜನವರಿ 26ರಂದು ರಾಜ್ಯಪಾಲರು ಧ್ವಜಾರೋಹಣ ನೆರವೇರಿಸಿ ನಾಡಿನ ಜನತೆಗೆ ಸಂದೇಶ ನೀಡಲಿದ್ದಾರೆ. ಸಾರ್ವಜನಿಕರು ತಪಾಸಣೆಯ ದೃಷ್ಟಿಯಿಂದ ಬೆಳಿಗ್ಗೆ 8 ಗಂಟೆಯೊಳಗೆ ಮೈದಾನ ತಲುಪುವಂತೆ ಸೂಚಿಸಲಾಗಿದೆ.


