Mangaluru|ಮೂಡಬಿದ್ರೆಯಲ್ಲಿ ಆಳ್ವಾಸ್ ವಿರಾಸತ್ ಸಂಭ್ರಮ

ಮಂಗಳೂರು: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಶಿಕ್ಷಣದ ಜತೆಗೆ ಸಾಹಿತ್ಯ ಸಾಂಸ್ಕೃತಿಕ ಜ್ಞಾನ ನೀಡುವ ಕಾರ್ಯ ಮಹತ್ವದ್ದು. ಡಾ. ಮೋಹನ್ ಆಳ್ವ ಅವರು ಯುವ ಪೀಳಿಗೆಯನ್ನು ವಿಭಿನ್ನವಾಗಿ ರೂಪಿಸುತ್ತಿದ್ದಾರೆ. ಭಾರತೀಯ ಸಂಸ್ಕೃತಿ ಮತ್ತು ಆಲೋಚನೆ ಇಲ್ಲಿ ಪ್ರತಿಫಲನವಾಗುತ್ತಿದೆ. ಆಳ್ವಾಸ್ ಕನ್ನಡ ಮಾಧ್ಯಮವನ್ನು ರಾಜ್ಯ ಸರ್ಕಾರ ಸರ್ವಶ್ರೇಷ್ಠ ಶಾಲೆ ಎಂದು ಘೋಷಿಸಿದೆ. ಮಾತೃಭಾಷೆ ಶಿಕ್ಷಣಕ್ಕೆ ಇನ್ನೂ ಹೆಚ್ಚು ಉತ್ತೇಜನ ನೀಡಬೇಕಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಹೇಳಿದರು.

ಮೂಡುಬಿದಿರೆ ಪುತ್ತಿಗೆ ಗ್ರಾಮದ ವಿವೇಕಾನಂದ ನಗರದ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ 29ನೇ ಆಳ್ವಾಸ್ ವಿರಾಸತ್ ಗೆ ಚಾಲನೆ ಹಾಗೂ ಮಿಜಾರುಗುತ್ತು ಆನಂದ ಆಳ್ವ ಅವರ ಭಾವಚಿತ್ರ ಇರುವ ಅಂಚೆ ಲಕೋಟೆ ಬಿಡುಗಡೆ ಮಾಡಿ ಮಾತನಾಡಿದರು. ಇಷ್ಟು ದೊಡ್ಡ ಪ್ರಮಾಣದ ಮಕ್ಕಳನ್ನು ಶಿಸ್ತಿನಿಂದ ಬೆಳೆಸೋದು ದೊಡ್ಡ ವಿಷಯ. ಅದು ಆಳ್ವಾಸ್ ನಲ್ಲಿ ಪೋಷಕರ ನಿರೀಕ್ಷೆಯಂತೆ ಬೆಳೆಸುತ್ತಿದ್ದಾರೆ. ಯಶಸ್ವಿ ವಿರಾಸತ್ ಮುಂದಿನ ಎಲ್ಲ ಕಾರ್ಯಗಳಿಗೆ ಪ್ರೇರೇಪಣೆ ನೀಡಲಿ ಎಂದರು.

ಇನ್ನು ಕ್ರೀಡೆಯಲ್ಲೂ ಇಲ್ಲಿನ ವಿದ್ಯಾರ್ಥಿಗಳು ಛಾಪು ಮೂಡಿಸಿದ್ದಾರೆ. ವಿರಾಸತ್ ಮೂಲಕ ಕಲಾವಿದರನ್ನು ಉತ್ತೇಜಿಸುವ ಮೂಲಕ ಮಕ್ಕಳಿಗೆ ಸಾಂಸ್ಕೃತಿಕ ಲೋಕಕ್ಕೆ ತೆರೆದುಕೊಳ್ಳಲು ಪ್ರೇರಣೆ ನೀಡುತ್ತಿದೆ. ಮಾತೃಭಾಷೆ ಶಿಕ್ಷಣ ವಿದ್ಯಾರ್ಥಿಗಳ ಬೆಳವಣಿಗೆಗೆ ಪೂರಕ ಎಂದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಆಳ್ವ ಅವರು ದೊಡ್ಡ ಯಾಗ ಮಾಡುತ್ತಿದ್ದಾರೆ. ಇದು ಜ್ಞಾನ ಜಾತ್ರೆ ಮತ್ತು ಜ್ಞಾನ ಯಾತ್ರೆ. ಮುಂದಿನ ಜನಾಂಗಕ್ಕೆ ಸಂಸ್ಕಾರ ಸಂಸ್ಕೃತಿ ನೀಡುವ ದೊಡ್ಡ ಕೆಲಸ. ವಿಜ್ಞಾನ ಜ್ಞಾನದೊಂದಿಗೆ ಸಂಸ್ಕಾರ ಸಂಸ್ಕೃತಿ ಬೆಳೆಯಬೇಕಿದೆ. ಈಗ ಭಾರತ ಕನ್ನಡದ ಬಡ ರಾಷ್ಟ್ರವಾಗಿ ಭಾರತ ಉಳಿದಿಲ್ಲ, ಹಿಂದಿಯ ಬಡಾ ರಾಷ್ಟ್ರ ಆಗುತ್ತಿದೆ ಎಂದು ಹೇಳಿದರು.

ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಭಾರತ್ ಸ್ಕೌಟ್ಸ್ ಗೈಡ್ಸ್‌ನ ರಾಜ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ , ಮೋಹನ್ ದೇವ್, ಅದಾನಿ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಉದ್ಯಮಿಗಳಾದ ಶಶಿಧರ ಶೆಟ್ಟಿ, ಪ್ರಸನ್ನ ಶೆಟ್ಟಿ, ಜಯಶ್ರೀ ಅಮರನಾಥ ಶೆಟ್ಟಿ, ಮುಸ್ತಫಾ ಎಸ್.ಎಂ., ಪ್ರವೀಣ್ ಕುಮಾರ್, ಪುತ್ತಿಗೆ ಗ್ರಾ.ಪಂ. ಅಧ್ಯಕ್ಷೆ ರಾಧಾ , ವಿಧಾನ ಪರಿಷತ್ ಸದಸ್ಯ ಭೋಜೆ ಗೌಡ, ಸುರೇಂದ್ರ ಕುಮಾರ್, ಗಣೇಶ್ ಕಾರ್ಣಿಕ್, ಪ್ರದೀಪ್ ಕುಮಾರ್ ಕಲ್ಕೂರ, ನಾಮ ನಿಸ್ಟದಾಸ್, ಪ್ರೇಮದಾಸ ಉಪಸ್ಧಿತರಿದ್ದರು.




