ಮಂಡ್ಯ : ಸಕ್ಕರೆನಾಡು ಮಂಡ್ಯದಲ್ಲಿ ಎರಡು ದಿನದಿಂದ 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ನಡೆಯುತ್ತಿದೆ. ಈ ಬಾರೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ನೀಡಬೇಕು ಎಂದು ಪ್ರಗತಿಪರರು ಧ್ವನಿ ಎತ್ತಿದ್ದರು. ಪ್ರತಿವರ್ಷದಂತೆ ಈ ಬಾರಿ ಕೂಡ ಸಸ್ಯಹಾರವನ್ನು ನೀಡಲಾಗುತ್ತಿತ್ತು. ಆದರೆ ಕೊನೆಯ ದಿನವಾದ ಇಂದು ಸಮ್ಮೇಳನದಲ್ಲಿ ಬಾಡೂಟ ಹಂಚಿಕೆ ಮಾಡಲಾಗಿದ್ದು, ಪೊಲೀಸ್ ಸಿಬ್ಬಂದಿ ಕೊನೆಗೂ ಮಾಂಸಾಹಾರ ವಶಪಡೆದುಕೊಂಡಿದ್ದಾರೆ.
87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಹಂಚಿಕೆಗಾಗಿ ಜಟಾಪಟಿ ಉಂಟಾಗಿದೆ. ಪ್ರಗತಿಪರರು ಮೊಟ್ಟೆ, ಚಿಕನ್, ಕಬಾಬ್, ಕೋಳಿ ಸಾಂಬಾರ್, ರಾಗಿ ಮುದ್ದೆ ಹಂಚಿಕೆ ಮಾಡಿದ್ದಾರೆ. ಈ ಮಧ್ಯೆ ಪೊಲೀಸರು ಮತ್ತು ಪ್ರಗತಿಪರರ ನಡುವೆ ವಾಗ್ವಾದ ಉಂಟಾಗಿದೆ.
ಇನ್ನು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಹಾರದ ಜೊತೆಗೆ ಮಾಂಸಾಹಾರವನ್ನೂ ನೀಡಬೇಕು ಎಂದು ಆಗ್ರಹಿಸುತ್ತಿದ್ದ ಪ್ರಗತಿಪರರು ನಿನ್ನೆ ಸಮ್ಮೇಳನದಲ್ಲಿ ಬಾಡೂಟ ಸವಿದಿದ್ದಾರೆ ಎನ್ನಲಾಗಿದೆ. ಇನ್ನೂ ಕೆಲವರು ಇದು ಆಹಾರ ಅಸಮಾನತೆ ಎತ್ತಿ ಹಿಡಿದ ಸಮ್ಮೇಳನವೆಂದು ಕಿಡಿಕಾರಿದ್ದಾರೆ.
ಬಾಡೂಟ ಹಂಚಿದ ವಿಚಾರಕ್ಕೆ ಸಾಹಿತ್ಯಾಸಕ್ತರು ಬೇಸರ ವ್ಯಕ್ತಪಡಿಸಿದ್ದಾರೆ. ಇದು ಬಾಡೂಟಕ್ಕಾಗಿ ಹೋರಾಟ ಮಾಡುವ ಸ್ಥಳವಲ್ಲ. ಇಲ್ಲಿ ಸಾಹಿತ್ಯ, ಭಾಷೆ ಬಗ್ಗೆ ಚರ್ಚೆ ಮಾಡಬೇಕು. ಮಂಡ್ಯ ಬಾಡೂಟ ಫೇಮಸ್ ಅಂತ ಈ ಸ್ಥಳದಲ್ಲಿ ಬಾಡೂಟ ಹಂಚಿದ್ದು ಸರಿಯಲ್ಲ. ಸಸ್ಯಹಾರ ಊಟ ಮಾಡಲು ಸಾಕಷ್ಟು ಜನರು ಬರುತ್ತಿದ್ದಾರೆ. ಮಾಂಸದೂಟ ಮಾಡಿಸಿದ್ದರೆ ಅದನ್ನ ನಿರ್ವಹಣೆ ಮಾಡುವುದು ಕಷ್ಟವಾಗುತಿತ್ತು ಎಂದಿದ್ದಾರೆ.
ಇನ್ನು ಬಾಡೂಟ ಜಟಾಪಟಿ ಮಧ್ಯೆ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯಾಸಕ್ತರಿಗೆ ವಿಶೇಷ ಊಟದ ವ್ಯವಸ್ಥೆ ಮಾಡಲಾಗಿತ್ತು. ಇಂದು ಮುದ್ದೆ, ಸೊಪ್ಪಿನ ಸಾಂಬಾರ್, ಅನ್ನ-ರಸಂ, ಮಜ್ಜಿಗೆ, ಸಂಡಿಗೆ ಹಾಗೂ ಬಾದುಷಾವನ್ನು ಬಾಣಸಿಗರು ಸಿದ್ಧಪಡಿಸಿದ್ದರು. ಸಮ್ಮೇಳನದಲ್ಲಿ ಭಾಗಿಯಾಗುವ ಪ್ರತಿಯೊಬ್ಬರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಭಾನುವಾರ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಆಗಮಿಸಿದ್ದರು.