Freedom TV

ಹೈಕಮಾಂಡ್ ಮೌನದ ವಿರುದ್ಧ ಮಂಡ್ಯ ಶಾಸಕ ಗಣಿಗ ರವಿಕುಮಾರ್ ಆಕ್ರೋಶ

ಮಂಡ್ಯ: ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಅವರು ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ಕುರಿತು ಕೇಳಿಬರುತ್ತಿರುವ ಗೊಂದಲದ ಹೇಳಿಕೆಗಳ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಬೂದನೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುವ ವಿಚಾರದಲ್ಲಿ ಹೈಕಮಾಂಡ್ ಕೂಡಲೇ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಈ ರೀತಿಯ ಅಸ್ಪಷ್ಟತೆ ಮುಂದುವರಿದರೆ ಪಕ್ಷ ಮತ್ತು ಸರ್ಕಾರ ಎರಡಕ್ಕೂ ದೊಡ್ಡ ಮಟ್ಟದ ಹಾನಿಯಾಗಲಿದೆ ಎಂಬ ಎಚ್ಚರಿಕೆ ನೀಡಿದ್ದಾರೆ.

ಹೈಕಮಾಂಡ್‌ನ ಮೌನವನ್ನು ಟೀಕಿಸಿದ ರವಿಕುಮಾರ್, ದಿನಕ್ಕೊಂದು ಹೇಳಿಕೆಗಳು ಹೊರಬರುತ್ತಿರುವುದು ನಿಷ್ಠಾವಂತ ಕಾರ್ಯಕರ್ತರಲ್ಲಿ ಗೊಂದಲ ಮತ್ತು ನೋವು ಉಂಟುಮಾಡುತ್ತಿದೆ ,ಈ ವಿಚಾರವನ್ನು ಹೈಕಮಾಂಡ್ ‘ಟೈಂ ಪಾಸ್’ ಎಂದು ಪರಿಗಣಿಸಬಾರದು ಮತ್ತು ಕೂಡಲೇ ಮಧ್ಯಪ್ರವೇಶಿಸಿ ಈ ವಿವಾದಕ್ಕೆ ಪೂರ್ಣವಿರಾಮ ಹಾಕಬೇಕು, ಶಿವಕುಮಾರ್ ಅವರಿಗೆ ಅಧಿಕಾರ ನೀಡುವ ಬಗ್ಗೆ ಹೌದು ಅಥವಾ ಇಲ್ಲ ಎಂಬ ಸ್ಪಷ್ಟ ಸಂದೇಶವನ್ನು ಹೈಕಮಾಂಡ್ ನೀಡಬೇಕಾದ ತುರ್ತು ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.

ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಶಾಸಕರ ವಿದೇಶಿ ಪ್ರವಾಸದ ಕುರಿತು ವ್ಯಂಗ್ಯವಾಡಿರುವ ಅವರು, ಕೇವಲ ವಿದೇಶ ಪ್ರವಾಸಗಳಿಂದ ಸರ್ಕಾರ ಅಥವಾ ಮುಖ್ಯಮಂತ್ರಿಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಶಾಸಕರು ಯಾರ ಹಣದಲ್ಲಿ ಅಥವಾ ಹೇಗೆ ಪ್ರವಾಸಕ್ಕೆ ಹೋಗಿದ್ದಾರೆ ಎಂಬುದು ಮುಖ್ಯವಲ್ಲ, ಅಂತಹ ಪ್ರವಾಸಗಳು ನಾಯಕತ್ವದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ತಾವೇ ಸ್ವತಃ 50 ಶಾಸಕರನ್ನು ವಿದೇಶಕ್ಕೆ ಕರೆದೊಯ್ದರೂ ಮುಖ್ಯಮಂತ್ರಿಯನ್ನು ಇಳಿಸಲು ಸಾಧ್ಯವಿಲ್ಲ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಮತ್ತು ಹೈಕಮಾಂಡ್ ನಡುವೆ ಈಗಾಗಲೇ ಮಾತುಕತೆಗಳು ನಡೆದಿದ್ದು, ಹೈಕಮಾಂಡ್ ಸರಿಯಾದ ಸಮಯದಲ್ಲಿ ನಿರ್ಧಾರ ಕೈಗೊಳ್ಳಲಿದೆ ಎಂಬ ನಂಬಿಕೆ ತಮಗಿದೆ ಆದರೆ ಸಾರ್ವಜನಿಕವಾಗಿ ನಡೆಯುತ್ತಿರುವ ಈ ಶೀತಲ ಸಮರ ಮತ್ತು ಹೇಳಿಕೆಗಳು ಸರ್ಕಾರಕ್ಕೆ ಕೆಟ್ಟ ಹೆಸರು ತರುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

Comments (0)

Your email address will not be published. Required fields are marked *

Back to top button