ಮಂಡ್ಯ : ಮಂಡ್ಯದ ಕೆರಗೋಡಿನಲ್ಲಿ ಹನುಮ ಧ್ವಜ ವಿವಾದ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡು ಪ್ರತಿಭಟನೆಯ ಕಿಚ್ಚು ಹಿಂಸಾರೂಪದ ಸಾಧ್ಯತೆಗಳನ್ನ ತೋರಿಸುತ್ತಿದೆ.ಒಂದು ಬಟ್ಟೆಯ ಧ್ವಜ ಕಾನೂನು ಸುವ್ಯವಸ್ಥೆಯ ನಿದ್ದೆ ಕೆಡಿಸಿದೆ ,ಕೆರೆಗೋಡು ಹಿಂದೆಂದೂ ಕಂಡಿರದ ಪ್ರಕ್ಷುಬ್ಧತೆಗೆ ಸಾಕ್ಷಿಯಾಗಿದೆ,ಚುನಾವಣೆಯ ಅಸ್ತ್ರಕ್ಕಾಗಿ ಹಪಹಪಿಸುತ್ತಿದ್ದ ವಿರೋಧ ಪಕ್ಷದವರ ದಾಹಕ್ಕೆ ನೀರೆಂಬ೦ತೆ ಕಾಂಗ್ರೆಸ್ ಮಾಡಿದ ಟ್ವೀಟ್ ಒಂದು ಬಿಜೆಪಿಗರಿಗೆ ದೊಡ್ಡ ಅಸ್ತ್ರವನ್ನೇ ಧಾರೆಯೆರೆದಿದೆ.
ಕಾಂಗ್ರೆಸ್ ಟ್ವೀಟ್ನಲ್ಲೇನಿತ್ತು?
ರಾಷ್ಟ್ರ ಧ್ವಜ ಹಾರಿಸುವ ಉದ್ದೇಶವನ್ನು ಹೈಜಾಕ್ ಮಾಡಿ ಮಂಡ್ಯದಲ್ಲಿ ಶಾಂತಿ ಕದಡಬೇಕು, ಸರ್ಕಾರಕ್ಕೆ ಸವಾಲು ಹಾಕಬೇಕು ಎನ್ನುವುದು ನಿಮ್ಮ ಪೂರ್ವಯೋಜಿತ ಹುನ್ನಾರವಾಗಿತ್ತಲ್ಲವೇ? ನಿಮ್ಮ ನಿಷ್ಠೆ ಸಂವಿಧಾನಕ್ಕೋ. ಮನುವಾದಕ್ಕೋ ? ನಿಮ್ಮ ನಿಷ್ಠೆ ದೇಶಕ್ಕೋ, ದೇಶದ್ರೋಹಕ್ಕೋ? ನಿಮ್ಮ ನಿಷ್ಠೆ ರಾಷ್ಟ್ರ ಧ್ವಜಕ್ಕೋ, ಧಾರ್ಮಿಕ ಧ್ವಜಕ್ಕೋ? ಉತ್ತರ ನೀಡುವ ದಮ್ಮು ತಾಕತ್ತು ಇದೆಯೇ ? ಎಂದು ಕಾಂಗ್ರೆಸ್ ಟ್ವೀಟ್ .
ಕಾಂಗ್ರೆಸ್ ಬರಹಗಳಲ್ಲಿ ಕೆರಗೋಡಿನ ಧ್ವಜ ವಿವಾದವನ್ನ ಬಣ್ಣಿಸುತ್ತಿರೋ ಹೊತ್ತಲ್ಲೇ ಕೆರೆಗೋಡಿನ ಹನುಮ ಧ್ವಜ ದಂಗಲ್ ಮತ್ತಷ್ಟು ತೀವ್ರ ಸ್ವರೂಪಕ್ಕೆ ತಿರುಗಿದೆ. ಬಿಜೆಪಿ ನಾಯಕರು ಮತ್ತು ಹಿಂದೂಪರ ಸಂಘಟನೆಗಳು ಕೆರಗೋಡು ಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪಾದಯಾತ್ರೆ ನಡೆಸಿದ್ರು. ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಜಟಾಪಟಿಯೇ ನಡೀತು.
ಹಿಂದೂ ಸಂಘಟನೆಗಳ ಪಾದಯಾತ್ರೆಗೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು, ಶಾಸಕರು, ಕಾರ್ಯಕರ್ತರು ಸಾಥ್ ನೀಡಿದ್ರು. ಮಾಜಿ ಸಚಿವ ಸಿ.ಟಿ ರವಿ, ಪ್ರೀತಂಗೌಡ ಸೇರಿ ಹಲವರು ಭಾಗಿಯಾಗಿದ್ರು. ಹೋರಾಟಕ್ಕೆ ಹೆಚ್‌ಡಿಕೆ, ಜನಾರ್ದನ ರೆಡ್ಡಿ ಸಹ ಸಾಥ್ ನೀಡಿದ್ರು. ಇದೇ ವೇಳೇ ಮಾತನಾಡಿದ ಮಾಜಿ ಶಾಸಕ ಸಿ.ಟಿ.ರವಿ, ಗುಂಡೇಟಿಗೆ ಹೆದರಲ್ಲ, ಲಾಠಿ ಏಟಿಗೆ ಹೆದರಲ್ಲ ಅಂತಾ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದಲ್ಲದೇ ನಮ್ಮ ಕಾರ್ಯಕರ್ತರ ಆಕ್ರೋಶ ಆವೇಶ ನೋಡ್ತಿದ್ರೆ ಏನು ಬೇಕಾದ್ರೂ ಸಂಭವಿಸಬಹುದು ಎಂಬ ಹೇಳಿಕೆ ಮಾತ್ರ ಕಾಂಗ್ರೆಸ್ಸಿಗರ ನಿದ್ದೆಗೆಡಿಸಿಬಿಟ್ಟಿದೆ.
ಪಾದಯಾತ್ರೆ ಮಾರ್ಗಮಧ್ಯೆ ಸಾತನೂರು ಗ್ರಾಮದಲ್ಲಿ ಹಾಕಿದ್ದ ಶಾಸಕ ರವಿ ಗಣಿಗ ಅವರ ಬ್ಯಾನರ್ ಹರಿದು ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದರು. ಇನ್ನು ಪಾದಯಾತ್ರೆ ಮಾರ್ಗದುದ್ದಕ್ಕೂ ಕಾಂಗ್ರೆಸ್ಗೆ ಸಂಬಂಧಿಸಿದ ಫ್ಲೆಕ್ಸ್, ಬ್ಯಾನರ್ಗಳನ್ನು ಹರಿದು ಹಾಕಲಾಗಿದೆ.
ಸರ್ಕಾರಕ್ಕೆ ಸಿ.ಟಿ.ರವಿ ಎಚ್ಚರಿಕೆ
ಲಾಠಿಚಾರ್ಜ್ ಕುರಿತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ ಮಾಜಿ ಸಚಿವ ಸಿ.ಟಿ.ರವಿ, ಸಂಘರ್ಷ ಉಂಟಾಗಲಿ ಎಂಬ ಕಾರಣದಿಂದ ಈ ರೀತಿ ಮಾಡಲಾಗಿದೆ ಎಂದು ಆರೋಪಿಸಿದರು. ಹನುಮಧ್ವಜ ಹಾರೋವರೆಗೂ ನಮ್ಮ ಹೋರಾಟ ನಿಲ್ಲಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆಯನ್ನು ರವಾನಿಸಿದ ಸಿಟಿ ರವಿಯ ಹೇಳಿಕೆ ಪೋಲೀಸರ ಜವಾಬ್ದಾರಿಯನ್ನ ಹೆಚ್ಚಿಸಿದೆ ,ಈಗಾಗ್ಲೇ ಮುಂಜಾಗ್ರತಾ ಕ್ರಮವಾಗಿ ಭಾರಿ ಸಂಖ್ಯೆಯ ಪೊಲೀಸ್ ವ್ಯವಸ್ಥೆಯನ್ನು ಮಾಡಲಾಗಿದ್ದು ಪರಿಸ್ಥಿತಿ ಮಾತ್ರ ಬೂದಿ ಮುಚ್ಚಿದ ಕೆಂಡದಂತಿದೆ.