ಧಾರವಾಡ : ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ನಡೆದ ಧ್ವಜ ಗಲಾಟೆಯನ್ನು ರಾಜಕೀಯವಾಗಿ ಎಳೆಯಬಾರದು ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ಧಾರವಾಡದಲ್ಲಿ ಮಾತನಾಡಿದ ಅವರು, ಈ ಧ್ವಜ ಗಲಾಟೆಗೆ ಸಂಬಂಧಿಸಿದಂತೆ ಈಗಾಗಲೇ ಸಿಎಂ ಉತ್ತರ ಕೊಟ್ಟಿದ್ದಾರೆ. ಇದನ್ನು ಹಿಂದೂ, ಮುಸ್ಲಿಂ ಗಲಾಟೆ ಮಾಡುವುದು ಸರಿಯಲ್ಲ. ಸಿಎಂಗೆ ಟಿಪ್ಪು ಸುಲ್ತಾನ್ ಎನ್ನುವುದು ಎಷ್ಟು ಸರಿ? ಹೀಗೆಲ್ಲ ಬಿಜೆಪಿ ಆರೋಪ ಮಾಡುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೀಗೆಲ್ಲ ಮಾಡುವುದು ಸರಿಯಲ್ಲ ಎಂದರು.
ರಾಷ್ಟ್ರಪತಿಗಳಿಗೆ ಸಿಎಂ ಏಕವಚನ ಪದ ಬಳಕೆ ಮಾಡಿದ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಲಾಡ್, ಸಿಎಂ ಅದನ್ನು ಬಾಯಿತಪ್ಪಿ ಮಾತನಾಡಿದ್ದಾರೆ. ಉದ್ದೇಶಪೂರ್ವಕವಾಗಿ ಹೇಳಿದ ಮಾತು ಅದಲ್ಲ. ಆದರೆ, ಇದರ ಹಿಂದೆ ಸಿಎಂ ಹೇಳಿದ ವಿಷಯನ್ನೂ ನೋಡಬೇಕಲ್ಲವೇ? ಅವರು ಮಹತ್ವದ ವಿಷಯ ಹೇಳಿದ್ದಾರೆ. ಸಂಸತ್ ಉದ್ಘಾಟನೆಗೆ ರಾಷ್ಟ್ರಪತಿಗಳನ್ನು ಕರೆದಿಲ್ಲ. ಅವರೊಬ್ಬ ವಿಧವೆ ಹೆಣ್ಣು ಮಗಳು, ಬುಡಕಟ್ಟು ಸಮಾಜದವರು ಅದೇ ಕಾರಣಕ್ಕೆ ಅವರನ್ನು ಸಂಸತ್ ಉದ್ಘಾಟನೆಗೆ ಕರೆದಿಲ್ಲ. ರಾಮ ಪ್ರಾಣ ಪ್ರತಿಷ್ಠಾಪನೆ ಪೂಜೆ ಮಾಡಿದ್ದು ತಪ್ಪು. ಹಿಂದೂ ಸಂಸ್ಕೃತಿ ಪ್ರಕಾರ ಬ್ರಾಹ್ಮಣರೇ ಪೂಜೆ ಮಾಡಬೇಕು.
ಇದರ ಬಗ್ಗೆ ಚರ್ಚೆಯಾಗಬೇಕು. ಪ್ರಧಾನಿ ರಾಮನ ಪೂಜೆ ಮಾಡಿದ್ದು ನಿಯಮ ಉಲ್ಲಂಘನೆಯಾಗಿದೆ. ಹಿಂದೂ ಸಂಸ್ಕೃತಿ ಪ್ರಕಾರ ಬ್ರಾಹ್ಮಣರೇ ಪೂಜೆ ಮಾಡಬೇಕಲ್ಲವೇ? ಇದನ್ನ ಸ್ವಾಮೀಜಿಗಳು ಕರೆಯಿಸಿ ಚರ್ಚೆ ಮಾಡಬೇಕು ಎಂದರು.