ಮಂಡ್ಯ: ಬೈಕ್ ಮೆಕ್ಯಾನಿಕ್​ ರಾತ್ರೋರಾತ್ರಿ ಲಾಟರಿಯಲ್ಲಿ‌ 25 ಕೋಟಿ ರೂ.‌ಬಹುಮಾನ ಪಡೆದಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣ ನಿವಾಸಿಯಾಗಿದ್ದ ಅಲ್ತಾಫ್ ಪಾಷಾ, ಕೇರಳ‌ ರಾಜ್ಯದ ಲಾಟರಿಯಲ್ಲಿ 25 ಕೋಟಿ ರೂ. ಗೆದ್ದಿದ್ದಾರೆ. ವೃತ್ತಿಯಲ್ಲಿ ಬೈಕ್ ಮೆಕ್ಯಾನಿಕ್ ಆಗಿರುವ ಅಲ್ತಾಫ್, ಇತ್ತೀಚಿಗಷ್ಟೆ ಕೇರಳಕ್ಕೆ ಹೋಗಿದ್ದಾಗ 500 ರೂ ಕೊಟ್ಟು ಲಾಟರಿ ಖರೀದಿ ಮಾಡಿದ್ದರು. ಇದೀಗ ಕೋಟಿ ಗೆದ್ದಿದ್ದಾರೆ.

15 ವರ್ಷದಿಂದ ಲಾಟರಿ ತೆಗೆದುಕೊಳ್ಳುತ್ತಿದ್ದ ಅಲ್ತಾಫ್

ಇನ್ನು ಬಹುಮಾನ ಬಂದಿರುವ ವಿಚಾರ ತಿಳಿಯುತ್ತಿದ್ದಂತೆ ಲಾಟರಿ ಹಣ ಪಡೆಯುವ ಪ್ರಕ್ರಿಯೆಗಾಗಿ ಅಲ್ತಾಫ್ ಕೇರಳಕ್ಕೆ ಪ್ರಯಾಣ ಬೆಳಸಿದ್ದಾರೆ. ಈ ಕುರಿತು ಮಾತನಾಡಿದ ಅವರು,  ‘25 ಕೋಟಿ ಲಾಟರಿ ಬರುತ್ತೆ ಎಂದು ಅಂದು ಕೊಂಡಿರಲಿಲ್ಲ. 15 ವರ್ಷದಿಂದ ಲಾಟರಿ ತೆಗೆದುಕೊಳ್ಳುತ್ತಿದ್ದೇನೆ. ಕರ್ನಾಟಕದಲ್ಲಿ ಲಾಟರಿ ಇದ್ದಾಗಲೂ ಲಾಟರಿಯಿಂದ ಲಾಸ್ ಮಾಡಿಕೊಂಡಿದ್ದೆ. ಕೇರಳದಲ್ಲಿ‌ ಸ್ನೇಹಿತರು, ಸಂಬಂಧಿಕರು ಇದ್ದ ಹಿನ್ನಲೆ ಆಗಾಗ ಕೇರಳಕ್ಕೆ ಹೋಗುತ್ತಿದ್ದೆ. ಅವಾಗ ಲಾಟರಿ ತೆಗೆದುಕೊಂಡು ಬರುತ್ತಿದೆ.

ಈಗ ಲಾಟರಿಯಲ್ಲಿ ಹಣ ಗೆದ್ದಿದ್ದೇನೆ ಎಂದು ಗೊತ್ತಾದಾಗ ನನಗೆ ನಂಬಲಾಗಲಿಲ್ಲ. ಮನೆಯವರು ಮೊದಲಿಗೆ ನಂಬಲಿಲ್ಲ. ಆನ್​ಲೈನ್​ನಲ್ಲಿ ನೋಡಿದ ಬಳಿಕವಷ್ಟೆ ಎಲ್ಲರಿಗೂ ನಂಬಿಕೆ ಬಂತು. ಈ ಹಣದಿಂದ ಅದ್ದೂರಿಯಾಗಿ ಮಗಳ ಮದುವೆ ಮಾಡಬೇಕು ಅಂದುಕೊಂಡಿದ್ದೇನೆ. ಒಂದು ಮನೆ ಖರೀದಿ ಮಾಡುತ್ತೇನೆ. ಮ್ಯಾಕ್ಯಾನಿಕ್ ಕೆಲಸ ಬಿಟ್ಟು ಬೇರೆ ಬಿಸಿನೆಸ್ ಮಾಡಬೇಕು ಅಂದುಕೊಂಡಿದ್ದೇನೆ ಎಂದು ಹೇಳಿದರು.

25 ಕೋಟಿ ಲಾಟರಿ; ಖುಷಿ ಹಂಚಿಕೊಂಡ ಅಲ್ತಾಫ್ ಪತ್ನಿ, ಮಗಳು

ಇನ್ನು 25 ಕೋಟಿ ಲಾಟರಿ ಬಂದ ಹಿನ್ನಲೆ ಅಲ್ತಾಫ್ ಪತ್ನಿ ಸೀಮಾ ಭಾನು ಮತ್ತು ಮಗಳು ತಾನಿಷಾ ಫಾತೀಮಾ ಅವರು ಟಿವಿ ಡಿಜಿಟಲ್​ ಜೊತೆ ಖುಷಿ ಹಂಚಿಕೊಂಡಿದ್ದು, ‘ಮೊದಲಿಗೆ ನಾವು ಲಾಟರಿಯಲ್ಲಿ ಬಹುಮಾನ ಬಂದಿದೆ ಎಂದು ನಂಬಿರಲಿಲ್ಲ‌. ಇಂದು ಬೆಳಿಗ್ಗೆ ನಮಗೆ ನಂಬಿಕೆ ಬಂದಿದ್ದು. 15 ವರ್ಷದಿಂದ ಲಾಟರಿ ತೆಗೆದುಕೊಳ್ಳುತ್ತಿದ್ದ ಅವರು ಲಾಟರಿ ತೆಗೆದುಕೊಳ್ಳುವುದಕ್ಕೆಂದು ಕೇರಳಕ್ಕೆ ಹೋಗುತ್ತಿದ್ದರು. 15 ವರ್ಷದಿಂದ ಯಾವುದೇ ಲಾಟರಿಯಲ್ಲಿ ಗೆದ್ದಿರಲಿಲ್ಲ‌. ಈಗಲೂ ಅಷ್ಟೆ ನಮಗೆ ಬಂದಿಲ್ಲ ಅಂತನೇ ಅಂದುಕೊಂಡಿದ್ದೇವು.

ಎರಡು ಲಾಟರಿ ಲಾಟರಿ ತಂದಿದ್ದರು. ಒಂದನ್ನು ಯಾರಿಗಾದರೂ ಕೊಟ್ಟುಬಿಡುತ್ತೇನೆ ಅಂದಿದ್ದರು. ಆದ್ರೆ, ಅದೇ ಗೆದ್ದುಬಿಟ್ಟರೆ ಅಂತ ಹೇಳಿದಕ್ಕೆ ಆ ಲಾಟರಿ ಇಟ್ಟುಕೊಂಡರು. ನೋಡಿದರೆ ಅದೇ ಲಾಟರಿಗೆ 25 ಕೋಟಿ ಬಹುಮಾನ ಬಂದಿದೆ. ಮೊದಲಿಗೆ ನಮಗೆ ನಂಬಿಕೆಯೆ ಇರಲಿಲ್ಲ. ಇಷ್ಟು ವರ್ಷ ಲಾಟರಿ ತೆಗೆದುಕೊಳ್ಳುವ ವಿಚಾರಕ್ಕೆ ಮನೆಯಲ್ಲಿ ಗಲಾಟೆ ಆಗಿದೆ. ಲಾಟರಿ ತೆಗೆದುಕೊಳ್ಳುವುದು ಬೇಡ ಅಂತ ಹೇಳುತ್ತಿದ್ದೇವು. ಇದೀಗ ಲಾಟರಿ ಗೆದ್ದಿರುವುದು ಖುಷಿಯಾಗಿದೆ. ಸ್ವಲ್ಪ ಸಾಲ ಇದೆ ಅದನ್ನು ತೀರಿಸಿ ಮನೆ ತೆಗೆದುಕೊಳ್ಳಬೇಕು ಎಂದು ಅಲ್ತಾಫ್ ಮಗಳು ಹಾಗೂ ಆತನ ಪತ್ನಿ ಖುಷಿ ಹಂಚಿಕೊಂಡಿದ್ದಾರೆ.

By Veeresh

Leave a Reply

Your email address will not be published. Required fields are marked *

Verified by MonsterInsights