Wednesday, April 30, 2025
32 C
Bengaluru
LIVE
ಮನೆ#Exclusive Newsಮಹಾರಾಷ್ಟ್ರ ಎಲೆಕ್ಷನ್​,288 ಕ್ಷೇತ್ರಗಳಲ್ಲಿ 99 ಅಭ್ಯರ್ಥಿಗಳ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ!

ಮಹಾರಾಷ್ಟ್ರ ಎಲೆಕ್ಷನ್​,288 ಕ್ಷೇತ್ರಗಳಲ್ಲಿ 99 ಅಭ್ಯರ್ಥಿಗಳ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ!

ಮುಂಬೈ: ನವೆಂಬರ್ 20 ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ 99 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಘೋಷಿಸಲಾಗಿದೆ. 288 ಸ್ಥಾನಗಳಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಬಿಜೆಪಿ, ಶಿವಸೇನಾ (ಶಿಂದೆ ಬಣ) ಮತ್ತು ಎನ್​ಸಿಪಿ (ಅಜಿತ್ ಪವಾರ್) ಪಕ್ಷಗಳು ಮಹಾಯುತಿ ಮೈತ್ರಿಕೂಟವಾಗಿ ಕಣಕ್ಕಿಳಿದಿವೆ. ಈ 288 ಸ್ಥಾನಗಳ ಪೈಕಿ 260 ಸ್ಥಾನಗಳಿಗೆ ಈ ಮೈತ್ರಿಕೂಟ ಪಕ್ಷಗಳ ಮಧ್ಯ ಸೀಟು ಹಂಚಿಕೆ ಆಗಿದೆ. ಇನ್ನುಳಿದ 28 ಸ್ಥಾನಗಳಿಗೆ ಮಾತುಕತೆ ನಡೆಯುತ್ತಿದೆ.

ಬಿಜೆಪಿ ಸದ್ಯ 99 ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಈ ಪೈಕಿ ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನಾಗಪುರ್ ಸೌತ್ ವೆಸ್ಟ್ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ. ಮಹಾರಾಷ್ಟ್ರ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಚಂದ್ರಶೇಖರ್ ಬವಾನ್​ಕುಲೆ ಅವರು ಕಾಮಠಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಸಚಿವರಾದ ಗಿರೀಶ್ ಮಹಾಜನ್ ಅವರಿಗೆ ಜಾಮ್ನರ್, ಸುಧೀರ್ ಮುಂಗಾಂತಿವಾರ್ ಅವರಿಗೆ ಬಲ್ಲಾರ್​ಪುರ್, ಶ್ರೀಜಯ ಅಶೋಕ್ ಚವಾಣ್ ಅವರಿಗೆ ಭೋಕರ್, ಆಶೀಶ್ ಶೆಲಾರ್ ಅವರಿಗೆ ವಾಂದ್ರೆ ವೆಸ್ಟ್, ಮಂಗಲ್ ಪ್ರಭಾತ್ ಲೋಧಾ ಅವರಿಗೆ ಮಲಬಾರ್ ಹಿಲ್, ರಾಹುಲ್ ನರ್ವೇಕರ್ ಅವರಿಗೆ ಕೊಲಾಬ, ಛತ್ರಪತಿ ಶಿವೇಂದ್ರ ರಾಜೇ ಭೋಸಲೆ ಅವರಿಗೆ ಸತಾರ ಕ್ಷೇತ್ರದ ಟಿಕೆಟ್ ಸಿಕ್ಕಿದೆ.

ಚಿಖಲೀ ಕ್ಷೇತ್ರಕ್ಕೆ ಶ್ವೇತಾ ವಿದ್ಯಾಧರ್ ಮಹಾಲೆ, ಫುಲಂಬರಿ ಕ್ಷೇತ್ರಕ್ಕೆ ಅನುರಾಧಾತಾಯ್ ಅತುಲ್ ಚವಾನ್, ಜಿಂತೂರ್ ಕ್ಷೇತ್ರಕ್ಕೆ ಮೇಘನಾ ಬೋರ್ಡಿಕರ್, ಬೋಕರ್ ಕ್ಷೇತ್ರ್ಕಕೆ ಶ್ರೀವಿಜಯಾ ಅಶೋಕ್ ಚವಾಣ್ ಅವರಿಗೂ ಟಿಕೆಟ್ ಸಿಕ್ಕಿದೆ.

ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳಿಗೆ ಒಟ್ಟಿಗೆ ಈ ಬಾರಿ ವಿಧಾನಸಭಾ ಚುನಾವಣೆಗಳಾಗುತ್ತಿವೆ. ಮಹಾರಾಷ್ಟ್ರದಲ್ಲಿ ನವೆಂಬರ್ 20ರಂದು ಒಂದೇ ಹಂತದಲ್ಲಿ ಮತದಾನವಾಗಲಿದೆ. ಜಾರ್ಖಂಡ್​ನಲ್ಲಿ ನವೆಂಬರ್ 13 ಮತ್ತು 20, ಎರಡು ಹಂತದಲ್ಲಿ ಮತದಾನವಾಗುತ್ತಿದೆ. ನವೆಂಬರ್ 23ರಂದು ಎರಡೂ ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ಇದರ ಜೊತೆಗೆ, ಮೂರು ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ. ದೇಶದ ವಿವಿಧೆಡೆ ಖಾಲಿ ಇರುವ 47ಕ್ಕೂ ಹೆಚ್ಚು ವಿಧಾನಸಭಾ ಸ್ಥಾನಗಳಿಗೂ ಉಪಚುನಾವಣೆಗಳು ನಡೆಯುತ್ತಿವೆ.

288 ಸ್ಥಾನಗಳಿರುವ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ, ಎನ್​ಸಿಪಿ, ಶಿವಸೇನಾ ಪಕ್ಷಗಳ ಮೈತ್ರಿಕೂಟ ಅಧಿಕಾರದಲ್ಲಿದೆ. ಶಿವಸೇನೆಯ ಏಕನಾಥ್ ಶಿಂದೆ ಸಿಎಂ ಆಗಿದ್ದರೆ, ಬಿಜೆಪಿಯ ದೇವೇಂದ್ರ ಫಡ್ನವಿಸ್ ಡಿಸಿಎಂ ಆಗಿದ್ದಾರೆ. ಬಿಜೆಪಿ 102, ಎನ್​ಸಿಪಿ 40 ಮತ್ತು ಶಿವಸೇನಾ 38 ಶಾಸಕರನ್ನು ಹೊಂದಿವೆ. ಅತ್ತ, ಉದ್ಧವ್ ಠಾಕ್ರೆ ಬಣದ ಶಿವಸೇನಾ, ಶರದ್ ಪವಾರ್ ಬಣದ ಎನ್​ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ಸೇರಿ ಮತ್ತೊಂದು ಮೈತ್ರಿ ಇದೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments