ಕ್ರೈಂ ಸ್ಟೋರಿಜಿಲ್ಲೆಸುದ್ದಿ

ಮಡಿಕೇರಿ ದಂಪತಿ ಕೊಲೆ ಪ್ರಕರಣ: ಅಕ್ರಮ ಸಂಬಂಧ ಬಯಲು!

ಕೊಡಗು; ಜಿಲ್ಲೆಯ ಭಾಗಮಂಡಲ ಸಮೀಪದ ಕುಂದಚೇರಿ ಗ್ರಾಮದಲ್ಲಿ ನಡೆದ ಯಶೋದಾ (45) ಮತ್ತು ಕುಂಞರಾಮ (47) ಎಂಬುವವರ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಗಿಲು ಹುಟ್ಟಿಸುವ ಸತ್ಯಾಂಶಗಳು ಹೊರಬಂದಿವೆ. ಸಂಬಂಧದಲ್ಲಿ ಅಣ್ಣ-ತಂಗಿಯಾಗಬೇಕಿದ್ದ ಇವರ ನಡುವಿನ ಅಕ್ರಮ ಸಂಬಂಧವೇ ಈ ರಕ್ತಪಾತಕ್ಕೆ ಪ್ರಮುಖ ಕಾರಣ ಎಂದು ತಿಳಿದುಬಂದಿದೆ.


ಕೊಲೆಯಾದ ಯಶೋದಾ ಮತ್ತು ಕುಂಞರಾಮ ಇಬ್ಬರೂ ಸ್ವಂತ ಅಕ್ಕ-ತಂಗಿಯರ ಮಕ್ಕಳು. ಇವರಿಬ್ಬರ ನಡುವೆ ಪ್ರೀತಿ ಚಿಗುರಿ, ಕಳೆದ ಎರಡು ವರ್ಷಗಳಿಂದ ಲಿವಿಂಗ್ ಟುಗೆದರ್ ಸಂಬಂಧದಲ್ಲಿದ್ದರು. ಈ ವಿಚಾರಕ್ಕೆ ಕುಂಞರಾಮ ತನ್ನ ಪತ್ನಿ ಕಲ್ಯಾಣಿಯನ್ನು ಕೂಡ ತ್ಯಜಿಸಿದ್ದನು. ಈ ಅನೈತಿಕ ಸಂಬಂಧವು ಕುಟುಂಬದ ಮತ್ತೊಬ್ಬ ಸದಸ್ಯ, ಅಂದರೆ ಇವರದೇ ಸಂಬಂಧಿಯಾದ ಚಂದು ಎಂಬಾತನ ಕೆಂಗಣ್ಣಿಗೆ ಗುರಿಯಾಗಿತ್ತು.


ಆರೋಪಿ ಚಂದುವಿಗೂ ಯಶೋದಾಳ ಮೇಲೆ ಒಲವಿತ್ತು ಎನ್ನಲಾಗಿದೆ. ಮಾರ್ಚ್ 11ರಂದು ಗ್ರಾಮದಲ್ಲಿ ನಡೆದ ನಾಮಕರಣ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದ ಇವರೆಲ್ಲರೂ ಮದ್ಯ ಸೇವಿಸಿದ್ದರು. ರಾತ್ರಿ ಕುಡಿದ ಅಮಲಿನಲ್ಲಿ ಯಶೋದಾಳ ಮನೆಗೆ ತೆರಳಿದ ಚಂದು, ಅಲ್ಲಿ ಅವರಿಬ್ಬರೂ ಜೊತೆಯಾಗಿರುವುದನ್ನು ಕಂಡು ಆಕ್ರೋಶಗೊಂಡಿದ್ದಾನೆ. ತಕ್ಷಣ ಮಚ್ಚಿನಿಂದ ಇಬ್ಬರ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿದ್ದು, ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.


ಈ ಪ್ರಕರಣವು ಕೇವಲ ಒಂದು ಅಪರಾಧವಾಗಿ ಉಳಿಯದೆ, ಸ್ಥಳೀಯ ಅಡಿಯ ಜನಾಂಗದ ಶೈಕ್ಷಣಿಕ ಹಿಂದುಳಿಯುವಿಕೆ ಮತ್ತು ಸಾಮಾಜಿಕ ಅರಿವಿನ ಕೊರತೆಯನ್ನು ಎತ್ತಿ ತೋರಿಸಿದೆ. ಕಾನೂನಿನ ಅರಿವಿಲ್ಲದಿರುವುದು ಮತ್ತು ಅಧಿಕಾರಿಗಳ ನಿರ್ಲಕ್ಷ್ಯವೇ ಇಂತಹ ಘಟನೆಗಳಿಗೆ ಕಾರಣ ಎಂಬ ಚರ್ಚೆ ಶುರುವಾಗಿದೆ. ಸದ್ಯ ಭಾಗಮಂಡಲ ಪೊಲೀಸರು ಆರೋಪಿ ಚಂದುವನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

Comments (0)

Your email address will not be published. Required fields are marked *

Back to top button