ಬಿಜೆಪಿ-ಜೆಡಿಎಸ್ ಪಕ್ಷಗಳು ತಮ್ಮ ಸಮಾನವೈರಿಯಾದ ಕಾಂಗ್ರೆಸ್ ಪಕ್ಷವನ್ನು ಲೋಕಸಭೆ ಚುನಾವಣೆಯಲ್ಲಿ ಮಣಿಸಲು ಮೈತ್ರಿ ಮಾಡಿಕೊಂಡಿದ್ದವು. ಆದ್ರೆ, ಸೀಟು ಹಂಚಿಕೆ ವಿಚಾರವಾಗಿ ಬಿಜೆಪಿ-ಜೆಡಿಎಸ್ ನಡುವೆ ಅಸಮಾಧಾನ ಸ್ಫೋಟಗೊಂಡಿದೆ. ರಾಜ್ಯದ 28 ಸ್ಥಾನಗಳ ಪೈಕಿ ಕೇವಲ 2 ಸೀಟ್ಗಳನ್ನು ಬಿಟ್ಟು ಕೊಡಲು ಬಿಜೆಪಿ ಮುಂದಾಗಿದೆ. ಬಿಜೆಪಿಯ ಈ ಧೋರಣೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಬಹಿರಂಗವಾಗಿಯೇ ಬೇಸರ, ಅತೃಪ್ತಿ ಹೊರಹಾಕಿದ್ದಾರೆ.
ಹಾಸನ ಮತ್ತು ಮಂಡ್ಯ ಕ್ಷೇತ್ರಗಳನ್ನು ಜೆಡಿಎಸ್ಗೆ ನೀಡಲು ಬಿಜೆಪಿ ಹೈಕಮಾಂಡ್ ಒಪ್ಪಿದರೂ ಕೋಲಾರ ಕ್ಷೇತ್ರವನ್ನು ಬಿಟ್ಟುಕೊಡಲು ಹಿಂದೇಟು ಹಾಕುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ,
ನಾವೇನು ಆರೇಳು ಸ್ಥಾನಗಳನ್ನು ಕೇಳಿಲ್ಲ, ನಮ್ಮಿಬ್ಬರ ನಡುವೆ ಚರ್ಚೆ ಆರಂಭವಾದ ದಿನದಿಂದಲೂ ನಾವು ಮೂರ್ನಾಲ್ಕು ಸ್ಥಾನಗಳನ್ನು ಕೇಳಿದ್ದೇವೆ. ಅಸಲಿಗೆ ಎರಡು ಸೀಟು ಪಡೆಯಲು ನಾವು ಇಷ್ಟೆಲ್ಲಾ ಪ್ರಯತ್ನ ಮಾಡಬೇಕಾ?, ಇಷ್ಟೆಲ್ಲಾ ಹೊಂದಾಣಿಕೆ ಮಾಡಿಕೊಳ್ಳಬೇಕಾ?
ಎಂದು ಬೇಸರ ಹೊರಹಾಕಿದರು. ಇದೇ ಸಂದರ್ಭದಲ್ಲಿ, ಈಗಲೂ ಹಾಸನ, ಮಂಡ್ಯದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದರೆ ನಮ್ಮ ಅಭ್ಯರ್ಥಿಗಳು ಸುಲಭವಾಗಿ ಗೆಲ್ಲುತ್ತಾರೆ ಎಂದರು. ಈ ಮೂಲಕ ಅಗತ್ಯ ಬಿದ್ರೆ ಏಕಾಂಗಿ ಸ್ಪರ್ಧೆಗೂ ಸೈ ಎಂಬ ಸುಳಿವನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿದರು.
ವಿಜಯಪುರ, ಕಲಬುರಗಿಯಲ್ಲಿ ಬಿಜೆಪಿಗಿಂತ ನಮ್ಮ ಶಕ್ತಿ ಹೆಚ್ಚಾಗಿದೆ. ಇಂತಹ ಕ್ಷೇತ್ರಗಳಲ್ಲಿ ನಮ್ಮನ್ನ ಹೇಗೆ ಬಳಕೆ ಮಾಡಿಕೊಳ್ಳಬೇಕು ಎಂಬುದಕ್ಕೆ ಬಿಜೆಪಿ ಹೈಕಮಾಂಡ್ ಜೊತೆ ಚರ್ಚೆಯಾಗಬೇಕು. ನಮ್ಮನ್ನ ಕಡೆಗಣಿಸಿದರೆ ಪರಿಣಾಮಗಳು ಬೇರೆಯದ್ದೆ ಆಗಿರುತ್ತವೆ.
18 ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಶೇಕಡಾ 3 ಮತಗಳು ಸ್ವಿಂಗ್ ಆದರೆ ಬಿಜೆಪಿಗೆ ಅನುಕೂಲವಾಗುತ್ತದೆ. ಇದಕ್ಕೆ ಮುಂದೆ ಪೆಟ್ಟು ಬಿದ್ದರೆ ಅದರ ಸಾಧಕ ಬಾಧಕಕ್ಕೆ ಅವರೇ ಜವಾಬ್ದಾರಿ
ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
ಪ್ರಧಾನಿ ಕಾರ್ಯಕ್ರಮಕ್ಕೂ ಆಹ್ವಾನ ಇಲ್ಲ