Freedom TV

ಬಣ್ಣದ ಲೋಕದಲ್ಲಿ ‘ಲವ್ ಸೀಸನ್ಸ್’ ಅಬ್ಬರ; ಚಿತ್ರೀಕರಣ ಅಂತ್ಯ!

ಎಲ್ಲರ ಬದುಕಿಗೆ ಹತ್ತಿರಾದ ಕಥಾನಕವನ್ನು ನವಿರು ಪ್ರೇಮದ ಪರಿಧಿಯಲ್ಲಿ ಕಟ್ಟಿಕೊಟ್ಟಿರುವ ಲವ್ ಸೀಸನ್ಸ್' ಚಿತ್ರ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿಕೊಂಡಿದೆ. ರಂಗಭೂಮಿ ಹಿನ್ನೆಲೆಯ ಕೃತ್ವಿಕ್ ನಿರ್ದೇಶನದಲ್ಲಿ ಮೂಡಿ ಬಂದಿರುವಲವ್ ಸೀಸನ್ಸ್’ ಇದೀಗ ಪೋಸ್ಟ್ ಪ್ರೊಡಕ್ಷನ್ ಕೆಲಸ ಕಾರ್ಯಗಳತ್ತ ಹೊರಳಿಕೊಂಡಿದೆ. `ಲವ್ ಸೀಸನ್ಸ್’ ನಮ್ಮ ಕಣ್ಣಿಗೆ ಕಂಡೂ ಕಾಣದಂತಿರುವ ಗಲ್ಲಿ ಗಲ್ಲಿಯ ಕಥೆಯೆಂಬುದು ನಿರ್ದೇಶಕರ ಮಾತು.

ರಂಗಭೂಮಿ ಮತ್ತು ಸಿನಿಮಾ ಜಗತ್ತಿನಲ್ಲಿ ಕಳೆದ ಹತ್ತು ವರ್ಷದಿಂದೀಚೆಗೆ ಕಾರ್ಯ ನಿರ್ವಹಿಸುತ್ತಿರುವವರು ಕೃತ್ವಿಕ್. `ಲವ್ ಸೀಸನ್ಸ್’ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ವಿಶೇಷವೆಂದರೆ, ರಂಗಭೂಮಿ ಹಿನ್ನೆಲೆಯ ಹೊಸಬರಿಂದಲೇ ಈ ಚಿತ್ರ ಕಳೆಗಟ್ಟಿಕೊಂಡಿದೆ. ಮಂಡ್ಯ ರಮೇಶ್ ಸಾರಥ್ಯದ ನಟನಾ ಸಂಸ್ಥೆಯಲ್ಲಿ ಪಳಗಿಕೊಂಡಿರುವ ಮುಕುಂದ ರಾಮಸ್ವಾಮಿ ನಾಯಕನಾಗಿ ನಟಿಸಿದ್ದಾರೆ. ದಿಯಾ ಕೀರ್ತಿ, ಚಂದನ ಗೌಡ ಮತ್ತು ಶ್ವೇತಾ ಕೊಗ್ಲೂರ್ ನಾಯಕಿಯರಾಗಿ ಜೊತೆಯಾಗಿದ್ದಾರೆ.

ಎನ್.ಆರ್ ಸ್ಟುಡಿಯೋಸ್ ಬ್ಯಾನರ್‌ನಡಿಯಲ್ಲಿ ಎನ್.ಆರ್ ಮಂಜುನಾಥ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಂಬಿಕೆಯೆಂಬ ಚುಂಬಕ ಶಕ್ತಿಯ ಸುತ್ತ ಹೊಸೆಯಲ್ಪಟ್ಟಿರುವ, ಪ್ರೇಮದ ಪರಾಗ ಮೆತ್ತಿಕೊಂಡಿರುವ ಕಥೆ `ಲವ್ ಸೀಸನ್ಸ್’ನಲ್ಲಿದೆ. ಬೆಂಗಳೂರಿನ ನಾನಾ ಏರಿಯಾಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಚಿತ್ರದ ಟೀಸರ್ ಬಿಡುಗಡೆಗೊಳಿಸಲು ಚಿತ್ರತಂಡ ತಯಾರಾಗುತ್ತಿದೆ. ವೀರ್ ಸಮರ್ಥ್ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೂಡಿ ಬಂದಿವೆ. ಕೆ.ಕಲ್ಯಾಣ್, ಪ್ರಮೋದ್ ಮರವಂತೆ ಮುಂತಾದವರು ಸಾಹಿತ್ಯ ಬರೆದಿದ್ದಾರೆ. ಅವಿನಾಶ ಶಾಸ್ತ್ರಿ ಛಾಯಾಗ್ರಹಣ, ಮಧು ತುಂಬಕೆರೆ ಸಂಕಲನ, ಭಜರಂಗಿ ಲೋಕಿ ನೃತ್ಯ ಸಂಯೋಜನೆಯಿರುವ ಈ ಚಿತ್ರದಲ್ಲಿ ಮಂಡ್ಯ ರಮೇಶ್, ರಾಜೇಶ್ ನಟರಂಗ, ಸಂಗೀತಾ ಅನಿಲ್, ಜಯತೀರ್ಥ, ಚೇತನ್ ದುರ್ಗ, ಹುಲಿ ಕಾರ್ತಿಕ್, ಬೇಬಿ ರಿತು ಸಿಂಗ್ ಮುಂತಾದವರ ತಾರಾಗಣವಿದೆ.

Comments (0)

Your email address will not be published. Required fields are marked *

Back to top button