ಬೆಂಗಳೂರು: ಹೊಸ ವಿದ್ಯುತ್ ಸಂಪರ್ಕ ಕಲ್ಪಿಸಲು ₹4.50 ಲಕ್ಷ ಲಂಚಕ್ಕೆ ಬೇಡಿಕೆ ಇರಿಸಿ ಮುಂಗಡವಾಗಿ ₹ 50,000 ಪಡೆಯುತ್ತಿದ್ದ ಆರೋಪದಡಿ ಬೆಸ್ಕಾಂ ಕಿರಿಯ ಎಂಜಿನಿಯರ್ ನಾಗರಾಜ್ ನರಸಿಂಹ ಅವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಾಣಸವಾಡಿ ಇ-8 ಉಪ ಘಟಕದ ಕಿರಿಯ ಎಂಜಿನಿಯರ್ ನಾಗರಾಜ್ ನರಸಿಂಹ ಅವರನ್ನು ಉದ್ಯಾನವೊಂದರ ಬಳಿ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ವಶಕ್ಕೆ ಪಡೆಯಲಾಗಿದೆ’ ಎಂದು ಲೋಕಾಯುಕ್ತ ಪೊಲೀಸರು ಹೇಳಿದರು.
ನಾಗರಾಜ್ ಲಂಚಕ್ಕೆ ಬೇಡಿಕೆ ಇರಿಸಿದ್ದ ಬಗ್ಗೆ ಗುತ್ತಿಗೆದಾರರೊಬ್ಬರು ದೂರು ನೀಡಿದ್ದರು. ಅದರನ್ವಯ ದಾಳಿ ಮಾಡಿ ಪುರಾವೆ ಸಮೇತ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ’ ಎಂದು ತಿಳಿಸಿದರು