Top Newsಜಿಲ್ಲೆಸುದ್ದಿ

ರಾಜ್ಯದ 7 ಜಿಲ್ಲೆಗಳಲ್ಲಿ ಲೋಕಾಯುಕ್ತ ಬೃಹತ್ ಬೇಟೆ..!

ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ಬೃಹತ್ ಕಾರ್ಯಾಚರಣೆ ನಡೆಸುವ ಮೂಲಕ ಸರ್ಕಾರಿ ಅಧಿಕಾರಿಗಳಿಗೆ ಬಿಗ್ ಶಾಕ್ ನೀಡಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯದ ಒಟ್ಟು ಏಳು ಜಿಲ್ಲೆಗಳಲ್ಲಿ ಈ ದಾಳಿ ನಡೆದಿದ್ದು, ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಮತ್ತು ಭ್ರಷ್ಟಾಚಾರದ ಗಂಭೀರ ದೂರುಗಳ ಹಿನ್ನೆಲೆಯಲ್ಲಿ ಅಧಿಕಾರಿಗಳು ಏಕಕಾಲಕ್ಕೆ ಪರಿಶೀಲನೆ ಆರಂಭಿಸಿದ್ದಾರೆ.ಈ ದಾಳಿಯಲ್ಲಿ ಪ್ರಮುಖವಾಗಿ ಕೆಆರ್‌ಐಡಿಎಲ್ ಚೀಫ್ ಇಂಜಿನಿಯರ್ ವಸಂತ್ ವಿ. ನಾಯಕ್ ಅವರಿಗೆ ಸೇರಿದ ನಿವಾಸ ಹಾಗೂ ಕಚೇರಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದರೊಂದಿಗೆ ಬಿಡಿಎ ವ್ಯಾಪ್ತಿಯ ಆರ್‌ಎಫ್‌ಓ ಆಗಿರುವ ಡಾಲೇಶ್ ಅವರ ನಿವಾಸದ ಮೇಲೂ ಲೋಕಾಯುಕ್ತ ತಂಡಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿವೆ. ಬಾಗಲಕೋಟೆ, ಹಾಸನ, ಮೈಸೂರು ಹಾಗೂ ಧಾರವಾಡದಂತಹ ಪ್ರಮುಖ ಜಿಲ್ಲೆಗಳಲ್ಲೂ ಈ ಕಾರ್ಯಾಚರಣೆ ಮುಂದುವರಿದಿದ್ದು, ಹಲವು ಉನ್ನತ ಮಟ್ಟದ ಅಧಿಕಾರಿಗಳು ಈಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಇನ್ನುಳಿದಂತೆ ರೈತ ಸೇವಾ ಸಹಕಾರ ಸಂಘದ ಸಿಇಓ ಶಶಿಧರ್ ಅವರ ಮನೆ ಮತ್ತು ಕಚೇರಿ, ಯಾದಗಿರಿಯ ವಿದ್ಯುತ್ ಇಲಾಖೆಯ ಉಪ ವಿದ್ಯುತ್ ಪರಿವೀಕ್ಷಕ ವೀರೇಶ್ ಹಾಗೂ ಮಂಡ್ಯದ ಲೋಕೋಪಯೋಗಿ ಇಲಾಖೆಯ ಎಎಇ ಎಸ್. ಸತೀಶ್ ಅವರಿಗೆ ಸೇರಿದ ಆಸ್ತಿಪಾಸ್ತಿಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಧಾರವಾಡದ ಹಿಂದುಳಿದ ವರ್ಗಗಳ ಇಲಾಖೆಯ ಕಲ್ಯಾಣಾಧಿಕಾರಿ ಸುರಕೊಡ ಮತ್ತು ವಿಜಯಪುರದ ಕೃಷ್ಣಾ ಭಾಗ್ಯ ಜಲ ನಿಗಮದ ಕಿರಿಯ ಇಂಜಿನಿಯರ್ ಪ್ರಕಾಶ್ ಕೂಡ ಲೋಕಾಯುಕ್ತರ ಈ ಕಾರ್ಯಾಚರಣೆಗೆ ಗುರಿಯಾಗಿದ್ದು, ಅಪಾರ ಪ್ರಮಾಣದ ಅಕ್ರಮ ಆಸ್ತಿ ಪತ್ತೆಯಾಗುವ ಸಾಧ್ಯತೆ ಇದೆ.

Comments (0)

Your email address will not be published. Required fields are marked *

Back to top button