ಪ್ರಜಾಪ್ರಭುತ್ವದ ದೊಡ್ಡ ಹಬ್ಬ ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಮಾತ್ರ ಬಾಕಿ ಇವೆ.. ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳಿದ್ದು, ಬೆಂಗಳೂರು ಉತ್ತರ ಕ್ಷೇತ್ರ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಲೋಕಸಭಾ ಚುನಾವಣೆ ಸಮೀಪಿಸ್ತಿರೋ ಈ ಹೊತ್ತಿನಲ್ಲಿ ಫ್ರೀಡಂ ಟಿವಿ ಕ್ಷೇತ್ರವಾರು ಸರ್ವೇ ಮಾಡ್ತಿದೆ. ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರವಾರು ಸರ್ವೇ ಮಾಡ್ತಿದೆ ಫ್ರೀಡಂ ಟಿವಿ. ಕ್ಷೇತ್ರದಲ್ಲಿ ಜಾತಿವಾರು ಬಲ, ಶಾಸಕರ ಬಲಾಬಲ, ಸ್ಥಳೀಯ ಜನಪ್ರತಿನಿಧಿಗಳ ಶಕ್ತಿ, ಪ್ರಧಾನಿ ಅಭ್ಯರ್ಥಿ ವಿಚಾರ, ಹಾಲಿ ಸಂಸದರ ಕಾರ್ಯಕ್ಷಮತೆ, ಮುಂದಿನ ಸಂಸದರು ಯಾರಾಗಬೇಕು ಎಂಬ ಹತ್ತು ಹಲವು ಪ್ರಶ್ನೆಗಳನ್ನ ಜನರ ಮುಂದಿಟ್ಟು, ಫ್ರೀಡಂ ಟಿವಿ ಸರ್ವೇ ಮಾಡ್ತಿದೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಯಾರ ತೆಕ್ಕೆಗೆ..?
ಕರ್ನಾಟಕದ 28 ಕ್ಷೇತ್ರಗಳ ಪೈಕಿ, ಬೆಂಗಳೂರು ಉತ್ತರ ಕ್ಷೇತ್ರ ಭಾರೀ ಕುತೂಹಲ ಮೂಡಿಸಿದೆ. ಹಾಲಿ ಸಂಸದರೂ ಆಗಿರೋ ಮಾಜಿ ಸಿಎಂ ಡಿವಿ ಸದಾನಂದಗೌಡರು ತಾವು ಈ ಬಾರಿ ನಿಲ್ಲೋದಿಲ್ಲ ಅನ್ನೋ ಸ್ಟೇಟ್ ಮೆಂಟ್ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಜೊತೆಗೆ ಬಿಜೆಪಿಯ ಹಲವು ಹಾಲಿ ಸಂಸದರಿಗೆ ಟಿಕೆಟ್ ಇಲ್ಲ ಅನ್ನೋ ಚರ್ಚೆಯೂ ಸದ್ಯ ಹಾಟ್ ಟಾಪಿಕ್. ಬೆಂಗಳೂರು ಉತ್ತರದ ಟಿಕೆಟ್ ಪಡೆಯೋಕೆ ಬಿಜೆಪಿಯಲ್ಲಿ ದೊಡ್ಡ ಪಟ್ಟಿಯೇ ಇದೆ. ಕಾಂಗ್ರೆಸ್ ಕೂಡ ಉತ್ತರ ವಶಕ್ಕೆ ಸರ್ಕಸ್ ಮಾಡ್ತಿದೆ.
ಗೌಡರೇ ನಿಲ್ತಾರಾ.? ಹೊಸಬರು ಬರ್ತಾರಾ.? ಹೈಕಮಾಂಡ್ ತಲೆಲೇನಿದೆ.?
ಸದಾನಂದಗೌಡರು ನಿಲ್ಲಲ್ಲ ಅಂತ ಹೇಳಿದ್ರೆ, ಅವರ ಮನವೊಲಿಕೆ ಹೆಸರಲ್ಲಿ ಬಿಜೆಪಿ ಒಕ್ಕಲಿಗ ನಾಯಕರು ಹೊಸ ಪ್ಲಾನ್ ಮಾಡ್ತಿದ್ದಾರೆ. ಇತ್ತ, ವಿಧಾನಸಭೆ ಚುನಾವಣೆ ಸೋತ ಸಿಟಿ ರವಿ, ಡಾ.ಕೆ. ಸುಧಾಕರ್ ಕೂಡ ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆಂಬ ಗುಸುಗುಸು ಇದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಂಡ್ಯದ ಪಕ್ಷೇತರ ಎಂಪಿ ಸುಮಲತಾ ಹೆಸರು ಚಲಾವಣೆಯಲ್ಲಿದೆ. ಬಟ್, ಇವೆಲ್ಲವೂ ಊಹಾಪೋಹಗಳಷ್ಟೇ ಅಂತ ಬಿಜೆಪಿಗರು ಹೇಳ್ತಿದ್ರೂ, ಹೈಕಮಾಂಡ್ ತಲೆಲೇನಿದೆ ಅನ್ನೋದು ಸಸ್ಪೆನ್ಸ್ ಆಗಿದೆ.
ಕೈ ಅಭ್ಯರ್ಥಿ ಯಾರು.? ಡಿಕೆ ಕ್ಯಾಂಡೇಟಾ.? ಸಿದ್ದು ಕ್ಯಾಂಡೇಟಾ.?
ಉತ್ತರ ಕ್ಷೇತ್ರ ಮರಳಿ ಪಡೆಯೋಕೆ ಕಾಂಗ್ರೆಸ್ ಕಸರತ್ತು ಮಾಡ್ತಿದೆ. ಸಚಿವ ಕೃಷ್ಣಭೈರೇಗೌಡರನ್ನ ನಿಲ್ಲಿಸೋಕೆ ಸಿದ್ದು ಉತ್ಸಾಹ ತೋರಿಸ್ತಿದ್ದಾರೆ. ಆದ್ರೆ, ಕೃಷ್ಣಭೈರೇಗೌಡರಿಗೆ ಇಷ್ಟವಿಲ್ಲ ಅನ್ನೋ ಮಾತಿದೆ. ಮತ್ತೊಂದೆಡೆ ಡಿಕೆ ಶಿವಕುಮಾರ್, ಆರ್ ಆರ್ ನಗರ ಕ್ಷೇತ್ರದ ಪರಾಜಿತ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಹೆಸರನ್ನ ಚಾಲ್ತಿಗೆ ತಂದಿದ್ದಾರೆ ಎನ್ನಲಾಗಿದೆ. ಬೆಂಗಳೂರು ಗ್ರಾಮಾಂತರ ಸಂಸದ ಡಿಕೆ ಸುರೇಶ್ ಹೆಸರೂ ಸದ್ದು ಮಾಡ್ತಿದೆ. ಇದ್ರ ಜೊತೆ ಆಪರೇಷನ್ ಹಸ್ತ ಸಕ್ಸಸ್ ಆದ್ರೆ, ಎಸ್ ಟಿ ಸೋಮಶೇಖರ್ ಅಥವಾ ಮಗ ಕೂಡ ರೇಸ್ ಗೆ ಬರಬಹುದು ಎಂಬ ಲೆಕ್ಕಾಚಾರವಿದ್ದಂತಿದೆ.
ಸಸ್ಪೆನ್ಸ್ ಪಾಲಿಟಿಕ್ಸ್ ಕ್ಷೇತ್ರದಲ್ಲಿ ಫ್ರೀಡಂ ಟಿವಿ ಮೆಗಾ ಸರ್ವೇ.!
ಬೆಂಗಳೂರು ಉತ್ತರ ಲೋಕಸಭಾ ವ್ಯಾಪ್ತಿಗೆ ಗೆ 8 ವಿಧಾನಸಭಾ ಕ್ಷೇತ್ರಗಳು ಬರುತ್ವೆ. 8ರಲ್ಲಿ ಐದರಲ್ಲಿ ಬಿಜೆಪಿ, ಮೂರರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಕೆಆರ್ ಪುರಂನಲ್ಲಿ ಭೈರತಿ ಬಸವರಾಜ್, ಯಶವಂತಪುರದಲ್ಲಿ ಎಸ್ ಟಿ ಸೋಮಶೇಖರ್, ದಾಸರಹಳ್ಳಿ ಮುನಿರಾಜು, ಮಹಾಲಕ್ಷ್ಮೀಲೇಔಟ್ ಕೆ ಗೋಪಾಲಯ್ಯ, ಮಲ್ಲೇಶ್ವರಂ ಸಿಎನ್ ಅಶ್ವತ್ಥ ನಾರಾಯಣ ಸೇರಿ ಬಿಜೆಪಿ ಐವರು ಶಾಸಕರಿದ್ದಾರೆ. ಉಳಿದವರು ಬ್ಯಾಟರಾಯನಪುರದಿಂದ ಕೃಷ್ಣಭೈರೇಗೌಡ, ಹೆಬ್ಬಾಳ ಬೈರತಿ ಸುರೇಶ್, ಪುಲಿಕೇಶಿನಗರ ಎಸಿ ಶ್ರೀನಿವಾಸ್ ಕಾಂಗ್ರೆಸ್ ಶಾಸಕರಿದ್ದಾರೆ.
ಎಸ್.ಟಿ. ಸೋಮಶೇಖರ್, ಗೋಪಾಲಯ್ಯ, ಭೈರತಿ ಬಸವರಾಜ್ ನಡೆ ಏನು.?
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ಮೇಲೆ, ಆಪರೇಷನ್ ಹಸ್ತ, ಕಾಂಗ್ರೆಸ್ ಘರ್ ವಾಪಸಿ ಅನ್ನೋ ಚರ್ಚೆ ಜೋರಾಗಿನೇ ಇದೆ. ಅದ್ರಲ್ಲೂ ಯಶವಂತಪುರ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಬಹಿರಂಗವಾಗಿಯೇ ಬಿಜೆಪಿ ವಿರುದ್ಧ ಬೇಸರ ವ್ಯಕ್ತಪಡಿಸಿದ್ರು. ಸೋಮಶೇಖರ್ ಕಾಂಗ್ರೆಸ್ ಸೇರ್ತಾರೆ ಅನ್ನೋದು ಇನ್ನೂ ಜೀವಂತವಾಗಿದೆ. ಹೀಗಾಗಿ ಸೋಮಶೇಖರ್ ನಡೆ ಕುತೂಹಲ ಮೂಡಿಸಿದೆ. ಮಹಾಲಕ್ಷ್ಮೀ ಲೇಔಟ್ ನ ಗೋಪಾಲಯ್ಯ, ಕೆಆರ್ ಪುರಂನ ಭೈರತಿ ಬಸವರಾಜ್ ಯಾರಿಗೆ ಬೆಂಬಲಿಸ್ತಾರೆ ಅನ್ನೋ ಸಸ್ಪೆನ್ಸ್ ಇದೆ. ಈ ವಿಚಾರದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಆಟ ಆಡಬಹುದು.
ಬೆಂಗಳೂರು ಉತ್ತರ ಕ್ಷೇತ್ರದ ಮತದಾರರ ಒಲವು ಯಾರತ್ತ..?
ಅತೀ ದೊಡ್ಡ ಕ್ಷೇತ್ರಗಳ ಪೈಕಿ ಬೆಂಗಳೂರು ಉತ್ತರ ಕ್ಷೇತ್ರವೂ ಒಂದು. ಸರಿ ಸುಮಾರು 30 ಲಕ್ಷಕ್ಕೂ ಹೆಚ್ಚು ಮತದಾರರು ಈ ಕ್ಷೇತ್ರದಲ್ಲಿದ್ದಾರೆ. ಅದ್ರಲ್ಲೂ ಒಕ್ಕಲಿಗ ಮತದಾರರೇ ನಿರ್ಣಾಯಕರು.
ಬೆಂ ಉತ್ತರದಲ್ಲಿ ಜಾತಿವಾರು ಮತದಾರರು
ಒಕ್ಕಲಿಗ – 13.5 ಲಕ್ಷ
ಎಸ್ಸಿ-ಎಸ್ಟಿ – 6.5 ಲಕ್ಷ
ಮುಸ್ಲಿಂ – 6.9 ಲಕ್ಷ
ಕುರುಬ – 5.4 ಲಕ್ಷ
ಲಿಂಗಾಯತ – 5.2 ಲಕ್ಷ
ಇತರೆ – 2.5 ಲಕ್ಷ
ಕ್ಷೇತ್ರ ವಾಪಸ್ ಪಡೆಯಲು ಕಾಂಗ್ರೆಸ್ ಬಿಗ್ ಪ್ಲಾನ್..!

2004ರಿಂದ ಈ ಕ್ಷೇತ್ರ ಬಿಜೆಪಿ ವಶದಲ್ಲಿದೆ. 2004ರಲ್ಲಿ ಹೆಚ್.ಟಿ ಸಾಂಗ್ಲಿಯಾನ ಮೊದಲ ಬಾರಿಗೆ ಬಿಜೆಪಿಯಿಂದ ಗೆದ್ರೆ, 2009ರಲ್ಲಿ ಡಿ.ಬಿ. ಚಂದ್ರೇಗೌಡರು ಬಿಜೆಪಿಯಿಂದ ಗೆದ್ದು ಬೀಗಿದ್ರು. ಬಳಿಕ 2014, 2019ರಲ್ಲಿ ಮಾಜಿ ಸಿಎಂ ಡಿವಿ ಸದಾನಂದಗೌಡರು ಈ ಕ್ಷೇತ್ರದಿಂದ ಗೆದ್ದು ಕೇಂದ್ರ ಮಂತ್ರಿಯೂ ಆಗಿದ್ದರು. ಆದ್ರೆ, 2004ಕ್ಕೂ ಮೊದಲು ಇಲ್ಲಿ ಕಾಂಗ್ರೆಸ್ ನದ್ದೇ ಹವಾ ಇತ್ತು. ಜಾಫರ್ ಷರೀಫ್ ಬರೋಬ್ಬರಿ 7 ಬಾರಿ ಇದೇ ಕ್ಷೇತ್ರದಿಂದ ಗೆದ್ದಿದ್ದರು. ಕ್ಷೇತ್ರ ಪುನರ್ ವಿಂಗಡನೆಗೂ ಮುನ್ನ ಕಾಂಗ್ರೆಸ್ನ ಭದ್ರಕೋಟೆಯಾಗಿತ್ತು. ಇದೀಗ ಕ್ಷೇತ್ರವನ್ನ ಮರಳಿ ಪಡೆಯೋದಕ್ಕೆ ಕಾಂಗ್ರೆಸ್ ಭರ್ಜರಿ ಪ್ಲಾನ್ ಹಾಕಿದೆ. 2019ರಲ್ಲಿ ಡಿವಿಎಸ್ ಸೋಲಿಸೋಕೆ ಆಗ ರಾಜ್ಯದಲ್ಲಿ ಮಂತ್ರಿಯಾಗಿದ್ದ ಕೃಷ್ಣಭೈರೇಗೌಡರೇ ಸ್ಪರ್ಧೆ ಮಾಡಿದ್ರು. ಆದ್ರೆ, ಒಂದೂವರೆ ಲಕ್ಷ ಮತಗಳ ಅಂತರಿಂದ ಡಿವಿಎಸ್ ಗೆದ್ದಿದ್ದು. ಈಗಲೂ ಕೃಷ್ಣಭೈರೇಗೌಡರು ರಾಜ್ಯದಲ್ಲಿ ಮಂತ್ರಿ. ಹೀಗಾಗಿ ಬಿಜೆಪಿಯಿಂದ ಯಾರೇ ಅಭ್ಯರ್ಥಿಯಾದ್ರೂ ಸೋಲಿಸೋಕೆ ಪಣತೊಟ್ಟಂತೆ ಕಾಣ್ತಿದೆ ಕಾಂಗ್ರೆಸ್.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರೆಂಟಿಗಳನ್ನ ಮುಂದಿಟ್ಟು ಚುನಾವಣೆ ಗೆಲ್ಲೋ ಸರ್ಕಸ್ ಮಾಡ್ತಿದೆ. ಬಿಜೆಪಿ ಮೋದಿ ಮುಖವನ್ನೇ ಇಟ್ಕೊಂಡು ಲೋಕಸಭೆ ಗೆಲ್ಲುವ ಪ್ರಯತ್ನದಲ್ಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರೋದ್ರಿಂದ, ಹೆಚ್ಚು ಸ್ಥಾನ ಗೆಲ್ಲುವ ಸವಾಲಿದೆ.
ಈ ಎಲ್ಲಾ ಅಂಶಗಳನ್ನ ಇಟ್ಕೊಂಡು ಫ್ರೀಡಂ ಟಿವಿ, ಕ್ಷೇತ್ರವಾರು ಮೆಗಾ ಸರ್ವೇ ಮಾಡ್ತಿದೆ. ಪ್ರತಿ ಕ್ಷೇತ್ರದಲ್ಲಿ ಮತದಾರರ ಮನದಾಳ, ಜಾತಿವಾರು ಲೆಕ್ಕಾಚಾರ, ಪ್ರಧಾನಿ ಅಭ್ಯರ್ಥಿ ವಿಚಾರ, ಕಾಂಗ್ರೆಸ್ ನ ಪ್ಲಸ್ಸು-ಮೈನಸ್ಸು, ಬಿಜೆಪಿಯ ಪ್ಲಸ್ಸು-ಮೈನಸ್ಸು, ಜೆಡಿಎಸ್ ಲೆಕ್ಕವೇನು.? ಯಾರಿಗೆ ಲಾಭ, ಯಾರಿಗೆ ನಷ್ಟ, ಎಲ್ಲವನ್ನೂ ಕೂಲಂಕುಶವಾಗಿ ಮಾಹಿತಿ ಕಲೆಹಾಕಿ, ಜನಾಭಿಪ್ರಾಯ ಸಂಗ್ರಹಿಸುವ ಕೆಲಸವನ್ನ ಫ್ರೀಡಂ ಟಿವಿ ಮಾಡ್ತಿದೆ. ಯಾವ ಪಕ್ಷದಿಂದ ಯಾರು ಅಭ್ಯರ್ಥಿಯಾದ್ರೆ ಒಳಿತು, ಗೆಲುವು-ಸೋಲಿನ ಲೆಕ್ಕಾಚಾರವನ್ನ ಫ್ರೀಡಂ ಟಿವಿ ತನ್ನ ಮೆಗಾ ಸರ್ವೇಯಲ್ಲಿ ಹೇಳಲಿದೆ..