ಮಂಡ್ಯ :ಕಳೆದ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾದ ಗಮನ ಸೆಳೆದಿದ್ದ ಮಂಡ್ಯ, ಈ ಬಾರಿ ಕುತೂಹಲದ ಅಖಾಡವಾಗಿ ಮಾರ್ಪಟ್ಟಿದೆ. ಒಂದೆಡೆ ದಳಪತಿಗಳು ಮಂಡ್ಯವನ್ನು ಮರಳಿ ವಶಕ್ಕೆ ಪಡೆಯಲು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ರೆ ಮತ್ತೊಂದೆಡೆ ಸ್ವಾಭಿಮಾನಿ ಸಂಸದೆ ಸುಮಲತಾ ಮಂಡ್ಯ ಬಿಟ್ಟುಕೊಡೋ ಮಾತೇ ಇಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ.
ಸಂಸದೆ ಸುಮಲತಾ ಅಂಬರೀಶ್ ಆಡಿದ ಮಾತುಗಳನ್ನ.. ಮಾಡಿದ ಪ್ರತಿಜ್ಞೆಯನ್ನ.. ಸ್ವಾಭಿಮಾನಿ ಹೆಸರಲ್ಲಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ದಳಪತಿಗಳ ವಿರುದ್ಧ ಭರ್ಜರಿಯಾಗಿ ಗೆದ್ದು ಬೀಗಿದ್ರು. ಈಗ ಮತ್ತೆ ಶತಾಯಗತಾಯ ಮಂಡ್ಯದಿಂದಲೇ ಸ್ಪರ್ಧಿಸಬೇಕೆಂದು ಪಣ ತೊಟ್ಟಿರುವ ಸುಮಲತಾ ದೆಹಲಿ ಮಟ್ಟದಲ್ಲಿ ಭಾರೀ ಲಾಬಿ ನಡೆಸುತ್ತಿದ್ದಾರೆ. ಬಿಜೆಪಿಯ ಹೈಕಮಾಂಡ್ ನಾಯಕರನ್ನು ಭೇಟಿಯಾಗುವ ಮೂಲಕ ಮಂಡ್ಯ ಬಿಡುವ ಮಾತೇ ಇಲ್ಲ ಅನ್ನೋ ಸಂದೇಶವನ್ನ ದಳಪತಿಗಳಿಗೆ ರವಾನಿಸುತ್ತಿದ್ದಾರೆ.
ಹೀನಾಯವಾಗಿ ಸೋತಿರುವ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ಗೆ ಮಣ್ಣು ಮುಕ್ಕಿಸಲು ರಣತಂತ್ರ ರೂಪಿಸುತ್ತಿದ್ದಾರೆ. ಆದ್ರೆ ದಳಪತಿಗಳಿಗೆ ಸ್ವಾಭಿಮಾನಿ ಸಂಸದೆ ಕಬ್ಬಿಣದ ಕಡಲೆಯಾಗಿದ್ದಾರೆ. ಈಗಾಗಲೇ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡೋ ಮೂಲಕ ಮಂಡ್ಯವನ್ನು ಬಿಟ್ಟು ಕೊಡುವ ಮಾತೇ ಇಲ್ಲ ಅನ್ನೋ ಸಂದೇಶವನ್ನ ರವಾನಿಸಿದ್ದಾರೆ.
ಸಕ್ಕರೆ ನಾಡು ಮಂಡ್ಯದ ಶ್ರೀರಂಗಪಟ್ಟಣದಲ್ಲಿ ನಡೆದ ನಟ ದರ್ಶನ್ ಬೆಳ್ಳಿ ಪರ್ವದಲ್ಲಿ ಸುಮಲತಾ ರಾಜಕೀಯ ಮಾತಾಡಿದ್ದಾರೆ. ಮಂಡ್ಯ ಮಣ್ಣಿನ ತಿಲಕ ಇಟ್ಟು ಅಂಬರೀಶ್‌ರನ್ನ ಬೀಳ್ಕೊಟ್ವಿ. ನಾನು ಕೂಡ ಈ ಮಣ್ಣನ್ನ ಬಿಡಲ್ಲ ಅಂತ ಮಂಡ್ಯ ಮಣ್ಣಲ್ಲೇ ನಿಂತು ಶಪಥ ಮಾಡೋ ಮೂಲಕ ದೋಸ್ತಿಗಳಿಗೆ ಸಂದೇಶ ರವಾನಿಸಿದ್ದಾರೆ.ಈ ಮಣ್ಣಿನ ಗುಣ ಇದೆಯಲ್ಲ, ಈ ಮಣ್ಣಿನ ತಿಲಕ ಹಚ್ಚಿ ನಾವು ಅಂಬರೀಶ್ ಅವರನ್ನು ಬೀಳ್ಕೊಡುಗೆ ಕೊಟ್ಟಿದ್ದೇವೆ. ಈ ಮಣ್ಣಿನ ಗುಣ, ಋಣ ಎಂದೆಂದಿಗೂ ಬಿಡಲ್ಲ. ಎಂದು ಗುಡುಗಿದರು ..