chennai

ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ ವ್ಯಕ್ತಿಯನ್ನು ಹೊಡೆದು ಕೊಂದ ಸ್ಥಳೀಯರು!

ಚೆನ್ನೈ : ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆ ವಿಕೋಪಕ್ಕೆ ಹೋಗಿ, ಸ್ಥಳೀಯರ ಹಲ್ಲೆಯಿಂದಾಗಿ ಆ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಾರ್ಚ್ 11 ರಂದು ನಡೆದ ಈ ವಿಲಕ್ಷಣ ಕೃತ್ಯವು ತಡವಾಗಿ ಬೆಳಕಿಗೆ ಬಂದಿದ್ದು, ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಮೃತ ವ್ಯಕ್ತಿಯನ್ನು 30 ವರ್ಷದ ಕಲೈಸೆಲ್ವನ್ ಎಂದು ಗುರುತಿಸಲಾಗಿದ್ದು, ಈತ ತನ್ನ ಸ್ನೇಹಿತನೊಂದಿಗೆ ಆಟೋದಲ್ಲಿ ಪ್ರಯಾಣಿಸುತ್ತಿದ್ದಾಗ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಮೇಲೆ ಅಸಭ್ಯವಾಗಿ ಮೂತ್ರ ವಿಸರ್ಜನೆ ಮಾಡಿದ್ದಾನೆ ಎನ್ನಲಾಗಿದೆ.

ಈ ಅಸಭ್ಯ ವರ್ತನೆಯಿಂದ ಆಕ್ರೋಶಗೊಂಡ ಮಹಿಳೆ ಮತ್ತು ಪಾನಮತ್ತ ಕಲೈಸೆಲ್ವನ್ ನಡುವೆ ತೀವ್ರ ವಾಗ್ವಾದ ನಡೆದಿದೆ. ಪರಿಸ್ಥಿತಿಯನ್ನು ಗಮನಿಸಿದ ಸ್ಥಳೀಯರು ಸ್ಥಳಕ್ಕೆ ಧಾವಿಸಿ ವ್ಯಕ್ತಿಯ ಮೇಲೆ ಮರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಜನರ ಗುಂಪು ನಡೆಸಿದ ಹಿಗ್ಗಾಮುಗ್ಗಾ ದಾಳಿಯಿಂದಾಗಿ ಕಲೈಸೆಲ್ವನ್ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಕೂಡಲೇ ಆತನನ್ನು ಸ್ಟಾನ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಚೆನ್ನೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಾನೂನನ್ನು ಕೈಗೆತ್ತಿಕೊಂಡು ವ್ಯಕ್ತಿಯ ಸಾವಿಗೆ ಕಾರಣರಾದವರ ಪತ್ತೆಗೆ ಮುಂದಾಗಿದ್ದಾರೆ. ಘಟನಾ ಸ್ಥಳದ ಸುತ್ತಮುತ್ತಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿರುವ ಪೊಲೀಸರು, ಹಲ್ಲೆ ನಡೆಸಿದವರನ್ನು ಶೀಘ್ರವೇ ಬಂಧಿಸಿ ಜೈಲಿಗಟ್ಟುವುದಾಗಿ ಭರವಸೆ ನೀಡಿದ್ದಾರೆ.

Comments (0)

Your email address will not be published. Required fields are marked *

Back to top button