ಸುದ್ದಿ

ಅಶ್ಲೀಲ ಸಂದೇಶ ಕಳುಹಿಸಿದವರಿಗೆ ಕಾನೂನು ಶಾಕ್; ಜಡ್ಜ್ ಮುಂದೆ ಹಾಜರಾದ ರಮ್ಯಾ!

ನಟಿ ರಮ್ಯಾ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳುಹಿಸಿ ಕಿರುಕುಳ ನೀಡಿದ್ದ ಪ್ರಕರಣದ ವಿಚಾರಣೆ ಈಗ ನಿರ್ಣಾಯಕ ಹಂತಕ್ಕೆ ತಲುಪಿದೆ. ನಟ ದರ್ಶನ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದ ವೇಳೆ, ದರ್ಶನ್ ಅಭಿಮಾನಿಗಳು ಎಂದು ಹೇಳಿಕೊಂಡಿದ್ದ ಕೆಲವರು ಅವರಿಗೆ ಇನ್‌ಸ್ಟಾಗ್ರಾಮ್ ಮೂಲಕ ಅಸಭ್ಯ ಕಮೆಂಟ್ ಮತ್ತು ಸಂದೇಶಗಳನ್ನು ಕಳುಹಿಸಿ ಮಾನಸಿಕ ಹಿಂಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ರಮ್ಯಾ ಅವರು ಯಾವುದೇ ಮುಲಾಜಿಲ್ಲದೆ ಸೈಬರ್ ಪೊಲೀಸರಿಗೆ ದೂರು ನೀಡುವ ಮೂಲಕ ಕಿರುಕುಳ ನೀಡುವವರಿಗೆ ಕಾನೂನಿನ ಪಾಠ ಕಲಿಸಲು ಮುಂದಾಗಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್ ಪೊಲೀಸರು ಈಗಾಗಲೇ 11 ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಇದರ ಬೆನ್ನಲ್ಲೇ ಇಂದು ಮಾರ್ಚ್ 10ರಂದು ರಮ್ಯಾ ಅವರು ಬೆಂಗಳೂರಿನ 46ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ನ್ಯಾಯಾಧೀಶರಾದ ಈ. ರಾಜೀವ ಗೌಡ ಅವರ ಮುಂದೆ ಸಾಕ್ಷ್ಯ ವಿಚಾರಣೆಗೆ ಹಾಜರಾದ ನಟಿ, ಫಿರ್ಯಾದಿ ಹೇಳಿಕೆಯನ್ನು ದಾಖಲಿಸಿದ್ದಾರೆ. ವಿಚಾರಣೆ ವೇಳೆ ತಮ್ಮ ವೃತ್ತಿಜೀವನ, ರಾಜಕೀಯ ಹಿನ್ನೆಲೆ ಮತ್ತು ಆರೋಪಿಗಳು ಕಳುಹಿಸಿದ್ದ ಆಕ್ಷೇಪಾರ್ಹ ಸಂದೇಶಗಳ ಬಗ್ಗೆ ನ್ಯಾಯಾಲಯಕ್ಕೆ ಸಂಪೂರ್ಣ ಮಾಹಿತಿಯನ್ನು ಒಪ್ಪಿಸಿದ್ದಾರೆ.

ವಿಷಯದ ಗಂಭೀರತೆ ಮತ್ತು ಸೂಕ್ಷ್ಮತೆಯನ್ನು ಗಮನಿಸಿದ ನ್ಯಾಯಾಲಯವು ಈ ವಿಚಾರಣೆಯನ್ನು ಮುಚ್ಚಿದ ಕೊಠಡಿಯಲ್ಲಿ ನಡೆಸಲು ತೀರ್ಮಾನಿಸಿದೆ. ಇನ್-ಕ್ಯಾಮರಾ ಪ್ರೊಸೀಡಿಂಗ್ಸ್ ಮೂಲಕ ಅತ್ಯಂತ ಗೌಪ್ಯವಾಗಿ ರಮ್ಯಾ ಅವರ ಹೇಳಿಕೆಗಳನ್ನು ಪಡೆಯಲಾಗಿದ್ದು, ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಸಾರ್ವಜನಿಕ ವ್ಯಕ್ತಿಗಳ ವಿರುದ್ಧ ನಡೆಯುವ ಇಂತಹ ಸೈಬರ್ ದಾಳಿಗಳನ್ನು ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಿರುವುದು ಈ ಕ್ರಮದ ಮೂಲಕ ಸ್ಪಷ್ಟವಾಗಿದೆ.

ಈ ಹಿಂದೆ ನಡೆದ ತನಿಖೆಯ ವೇಳೆ ಪೊಲೀಸರು ಆರು ಮಂದಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು ಹಾಗೂ ಕಿರುಕುಳ ನೀಡಲು ಬಳಸಲಾಗಿದ್ದ ಸುಮಾರು 50 ಸಾಮಾಜಿಕ ಜಾಲತಾಣ ಖಾತೆಗಳನ್ನು ಬಂದ್ ಮಾಡಿಸಿದ್ದರು. ಬಂಧನದ ಭೀತಿಯಿಂದ 20ಕ್ಕೂ ಹೆಚ್ಚು ಆರೋಪಿಗಳು ತಲೆಮರೆಸಿಕೊಂಡಿದ್ದು, ಸದ್ಯ ಬಂಧಿತರಾಗಿದ್ದವರು ಜಾಮೀನಿನ ಮೇಲೆ ಹೊರಬಂದಿದ್ದಾರೆ.

Comments (0)

Your email address will not be published. Required fields are marked *

Back to top button