ಬೆಂಗಳೂರು : ಭಾರತೀಯ ಆಟೋ ಮಾರುಕಟ್ಟೆಯಲ್ಲಿ ತನ್ನದೆ ಇತಿಹಾಸ ನಿರ್ಮಿಸಿ ಕಣ್ಮರೆಯಾಗಿದ್ದ ಕೈನೆಟಿಕ್ ಲೂನ್ ಇದೀಗ ಎಲೆಕ್ಟ್ರಿಕ್ ರೂಪದಲ್ಲಿ ಮರಳಿ ಮಾರುಕಟ್ಟೆಗೆ ಲಗ್ಗೆಯಿಡುತ್ತಿದ್ದು, ಹೊಸ ಇವಿ ಸ್ಕೂಟರ್ ಮಾದರಿಗಾಗಿ ಜನವರಿ 26 ರ ಗಣರಾಜ್ಯೋತ್ಸವ ದಿನದಂದೇ ರೂ. 500 ಮುಂಗಡದೊಂದಿಗೆ ಅಧಿಕೃತ ಬುಕಿಂಗ್ ಪ್ರಾರಂಭವಾಗುತ್ತಿದೆ. ಗಣರಾಜ್ಯೋತ್ಸವ ದಿನದಂದೆ ಹೊಸ ಲೂನಾ ಎಲೆಕ್ಟ್ರಿಕ್ ಉತ್ಪಾದನಾ ಮಾದರಿಯು ಅನಾವರಣಗೊಳ್ಳುತ್ತಿದ್ದು, ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.
ಭಾರತದಲ್ಲಿ ಈ ಹಿಂದೆ ಲೂನಾ ಮತ್ತು ಕೈನೆಟಿಕ್-ಹೋಂಡಾ ಸ್ಕೂಟರ್ ಬ್ರಾಂಡ್ ಗಳೊಂದಿಗೆ ಭಾರೀ ಜನಪ್ರಿಯತೆ ಸಾಧಿಸಿದ್ದ ಕೈನೆಟಿಕ್ ಕಂಪನಿಯು ಇದೀಗ ಕೈನೆಟಿಕ್ ಗ್ರೀನ್ ಬ್ರಾಂಡ್ ಅಡಿಯಲ್ಲಿ ವಿವಿಧ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಲೂನಾ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಆಕರ್ಷಕ ಬೆಲೆಯೊಂದಿಗೆ ಅತ್ಯುತ್ತಮ ತಾಂತ್ರಿಕ ಅಂಶಗಳನ್ನು ಹೊಂದಿರಲಿದೆ.
ಬಿಡುಗಡೆಯ ಮಾಹಿತಿ ಹೊರತಾಗಿ ಹೊಸ ಲೂನಾ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯ ಬ್ಯಾಟರಿ ಪ್ಯಾಕ್ ಮತ್ತು ಮೈಲೇಜ್ ಮಾಹಿತಿಗಳನ್ನು ಗೌಪ್ಯವಾಗಿರಿಸಿರುವ ಕೈನೆಟಿಕ್ ಗ್ರೀನ್ ಕಂಪನಿಯು ಗಣರಾಜ್ಯೋತ್ಸವ ದಿನದಂದೇ ಅಧಿಕೃತವಾಗಿ ಬಹಿರಂಗ ಪಡಿಸಲಿದ್ದು, ಇದು ಸಾಮಾನ್ಯ ಪೆಟ್ರೋಲ್ ಮಾದರಿಗಳಂತೆ ಗುಣಮಟ್ಟದ ಉತ್ಪಾದನೆಯೊಂದಿಗೆ ಹೆಚ್ಚು ಬಾಳ್ವಿಕೆಯ ವಿಶ್ವಾಸ ವ್ಯಕ್ತಪಡಿಸಲಾಗಿದೆ.