ಸರ್ಕಾರಿ ಭೂಮಿ ಪರಭಾರೆ – ಇಬ್ಬರು ಕಂದಾಯ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಅನುಮತಿ ಕೋರಿ ಕೆಆರ್ ಎಸ್ ಠಾಣಾ ಪೊಲೀಸರಿಂದ ಡಿಸಿಗೆ ನ್ಯಾಯಾಲಯ ಮನವಿ
ಮಂಡ್ಯ: ಸರ್ಕಾರಿ ಭೂಮಿಯನ್ನು ಖಾಸಗಿ ವ್ಯಕ್ತಿಗೆ ಭೂಪರಿವರ್ತನೆ ಮೂಲಕ ಪರಭಾರೆ ಮಾಡಿರುವ ಇಬ್ಬರು ಕಂದಾಯ ಅಧಿಕಾರಿಗಳ ವಿರುದ್ದ ಕೆ ಆರ್ ಎಸ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದ್ದು, ಇಬ್ಬರನ್ನು ಅಭಿಯೋಜನೆಗೆ ಒಳಪಡಿಸಲು ಅನುಮತಿ ಕೋರಿ ಡಿಸಿ ಡಾ.ಕುಮಾರ ಅವರಿಗೆ ಪೊಲೀಸರು ಮನವಿ ಮಾಡಿದ್ದಾರೆ.
ಅಕ್ರಮ ಎಸಗಿದ ಅರಕೆರೆ ಹೋಬಳಿಯ ಹಾಲಿ ರಾಜಸ್ವ ನಿರೀಕ್ಷಕ ಪಿ.ಪುಟ್ಟಸ್ವಾಮಿ ಹಾಗೂ ಹಾಲಿ ಶಿರಸ್ತೆದಾರ್ ಮದ್ದೂರು ತಾಲ್ಲೂಕು ಕಚೇರಿಯ ಜಯರಾಮಮೂರ್ತಿ ಬಂಧನ ಸನ್ನಿಹಿತವಾಗಿದೆ.
2023ರ ಡಿ.12 ರಂದು ರಾಜಸ್ವ ನಿರೀಕ್ಷಕ ಬಸವರಾಜು ಸಿ ಎಂಬುವವರು ಈ ಅವ್ಯವಹಾರ ಕುರಿತು ಕೆ.ಆರ್.ಎಸ್ ಪೊಲೀಸ್ ಠಾಣೆಯಲ್ಲಿ ಮೊ.ನಂ 257/2023 ಕಲಂ 420 ಐಪಿಸಿ ಕೂಡ 95, 192(ಎ) ಕರ್ನಾಟಕ ಭೂಕಂದಾಯ ಕಾಯ್ದೆ 1964 ರಡಿ ದೂರು ದಾಖಲಿಸಿದ್ದರು.
ಬೆಳಗೊಳ ಗ್ರಾಮದ ಪ್ರಭಾರ ಆರ್ ಐ ಆಗಿದ್ದ ಜಯರಾಮಮೂರ್ತಿ ಹಾಗೂ ಗ್ರಾಮ ಆಡಳಿತ ಅಧಿಕಾರಿಯಾಗಿದ್ದ ಪಿ.ಪುಟ್ಟಸ್ವಾಮಿ ಅವರು, ಬೆಳಗೊಳ ಗ್ರಾಮದ ಸರ್ವೇ ನಂ.44ರಲ್ಲಿ 2.13.0ಎಕರೆ ಜಮೀನಿನ ಪೈಕಿ 0.14.0 ಗುಂಟೆ ಕಾವೇರಿ ನೀರಾವರಿ ನಿಗಮಕ್ಕೆ ನಾಲಾ ಜಾಗ ಎಂದು ಭೂಸ್ವಾಧೀನ ಮಾಡಲಾಗಿತ್ತು. ಸದರಿ ನಾಲಾ ಜಾಗವನ್ನು ಸಹ ಸೇರಿಸಿ ವಸತಿ ಉದ್ದೇಶಕ್ಕೆ ಅಕ್ರಮವಾಗಿ ಸರ್ಕಾರಕ್ಕೆ ಮೋಸ ಮಾಡುವ ಉದ್ದೇಶದಿಂದ ತಪ್ಪು ಮಾಹಿತಿ ನೀಡಿ ಭೂಪರಿವರ್ತನೆ ಮಾಡಿಸಿದ್ದಾರೆ ಎಂದು ದೂರಲಾಗಿದೆ.
ಈ ಸಂಬಂಧ ಸದರಿ ಭೂಮಿಯ ಭೂಪರಿವರ್ತನೆಯ ಸ್ಥಳ ಮಹಜರ್ ನಲ್ಲಿ ಕಾವೇರಿ ನೀರಾವರಿ ನಿಗಮದ ನಾಲಾ ಜಾಗಕ್ಕೆ ಭೂಸ್ವಾಧೀನ ಎಂದು ನಮೂದಿಸದೆ ಅಕ್ರಮ ಎಸಗಿರುವುದು ದಾಖಲಾತಿಗಳಿಂದ ಧೃಢಪಟ್ಟಿದೆ. ಹೀಗಾಗಿ ಎಫ್ ಐ ಆರ್ ಪತ್ರದ ಜೊತೆ ಪೂರ್ಣ ದಾಖಲಾತಿ ಹಾಕಿ ಅಭಿಯೋಜನೆಗೆ ಒಳಪಡಿಸಲು ಅನುಮತಿ ಕೋರಲಾಗಿದೆ. ಇಬ್ಬರು ಅಧಿಕಾರಿಗಳ ಬಂಧನ ಸನ್ನಿಹಿತವಾಗಿದೆ.