ಬೆಳಗಾವಿ: ಮತ್ತೊಂದು ಸುತ್ತಿಗೆ ಲಕ್ಷ್ಮಿ ಹೆಬ್ಬಾಳ್ಕರ್ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ. ಈ ಬಾರಿ ಕನ್ನಡಿಗರ ಕೋಪ ನೆತ್ತಿಗೇರುವಂತಹ ಸ್ಟೇಟ್ ಮೆಂಟ್ ಕೊಟ್ಟಿದ್ದಾರೆ. ಸ್ವತಃ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ಕಾಂಗ್ರೆಸಿಗರಲ್ಲೇ ಇರಿಸು ಮುರಿಸು ತಂದಿದೆ. ಹೌದು ಮಾತಿನ ಭರದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ವತಂತ್ರ್ಯ ಪೂರ್ವದಲ್ಲಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿತ್ತು ಎಂದಿದ್ದಾರೆ. ಕಾರದಗಾ ಗ್ರಾಮದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಭಾಷೆ, ನೆಲ ಜಲ ಎಂದು ಹೊಗಳಿದ ಲಕ್ಷ್ಮಿ ಮುಂದೆ ಮಹಾರಾಷ್ಟ್ರ ಪರವಾಗಿ ಬ್ಯಾಟ್ ಬೀಸಿದ್ದಾರೆ.
ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅತಿಥಿಯಾಗಿ ಬಂದಿದ್ದ ಲಕ್ಷ್ಮಿ ಹೆಬ್ಬಾಳ್ಕರ್, ವೇದಿಕೆ ಮೇಲೆ ನಿಂತು ಇಂತಹದ್ದೊಂದು ಹೇಳಿಕೆ ನೀಡುತ್ತಲೇ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲದೆ ಆ ವಿಡಿಯೋ ಕೂಡ ವೈರಲ್ ಆಗುತ್ತಿದ್ದು ಕನ್ನಡಿಗರ ಕೋಪಕ್ಕೆ ಕಾರಣವಾಗಿದೆ.
ಇನ್ನು ಲಕ್ಷ್ಮಿ ಹೆಬ್ಬಾಳ್ಕರ್ ಈ ರೀತಿ ವಿವಾದಾತ್ಮಕ ಹೇಳಿಕೆ ನೀಡುತ್ತಿರೋದು, ಮಹಾರಾಷ್ಟ್ರ ಪರವಾಗಿ ಬ್ಯಾಟ್ ಬೀಸುತ್ತಿರೋದು ಇದೇ ಮೊದಲೇನಲ್ಲ, ಈ ಹಿಂದೆಯೂ ಮಹಾರಾಷ್ಟ್ರಕ್ಕೆ ನಾನೇ ಜೈ ಎನ್ನುವೆ ಎಂಬ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದರು. ಬೆಳಗಾವಿ ತಾಲೂಕಿನ ಬಸರಿಕಟ್ಟಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದ ಭಾಷಣದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ನ್ಯಾಯಾಲಯದಲ್ಲಿರುವ ಗಡಿ ವಿವಾದ ತೀರ್ಪು ಮಹಾರಾಷ್ಟ್ರದ ಪರವಾಗಿ ಬಂದರೆ ‘ಮಹಾ’ ಧ್ವಜ ಹಿಡಿದು ಮೊದಲು ನಾನೇ ‘ಜೈ ಮಹಾರಾಷ್ಟ್ರ’ ಎನ್ನುತ್ತೇನೆ ಎಂದಿದ್ದರು. ಇನ್ನು ವಿಶ್ವಗುರು ಬಸವಣ್ಣ ಕುರಿತಂತೆಯೂ ಅವಹೇಳನಕಾರಿ ಭಾಷಣ ಮಾಡಿ ಕನ್ನಡಿಗರ ಕೋಪಕ್ಕೆ ಗುರಿಯಾಗಿದ್ದರು.
ಮಹಾರಾಷ್ಟ್ರದ ಪರವಾಗಿ ಕಾಂಗ್ರೆಸ್‌ನ ಲಕ್ಷ್ಮೀ ಹೆಬ್ಬಾಳ್ಕರ್ ಅವರು ನೀಡಿರುವ ಹೇಳಿಕೆಗೆ ಕಾಂಗ್ರೆಸ್ ಮುಖಂಡರು ಸೇರಿದಂತೆ ರಾಜಕೀಯ ನಾಯಕರಿಂದ ತೀವ್ರ ಟೀಕೆ, ಆಕ್ಷೇಪಗಳು ಕೇಳಿ ಬಂದಿವೆ. ಹೆಬ್ಬಾಳ್ಕರ್ ನೀಡಿರುವ ಹೇಳಿಕೆ ತಪ್ಪು, ಹಾಗೆ ಹೇಳಬಾರದಿತ್ತು ಎಂದು ಕಾಂಗ್ರೆಸ್‌ನ ಸತೀಶ್ ಜಾರಕಿ ಹೊಳಿ ಹೇಳಿದ್ದಾರೆ. ಬಿಜೆಪಿಯ ಸುರೇಶ್ ಕುಮಾರ್ ಅವರು ಕೂಡ ಹೆಬ್ಬಾಳ್ಕರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಪಿಸಿಸಿ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರು ಕೂಡ ಹೆಬ್ಬಾಳ್ಕರ್ ಅವರ ಈ ಹೇಳಿಕೆಗೆ ಸಂಬಂಧಿಸಿದಂತೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರು ಯಾವ ಸನ್ನಿವೇಶದಲ್ಲಿ ಆ ಹೇಳಿಕೆ ನೀಡಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಹೇಳಿದ್ದಾರೆ. ಒಟ್ನಲ್ಲಿ ಪದೇ ಪದೇ ಮಹಾರಾಷ್ಟ್ರಕ್ಕೆ ಜೈ ಎನ್ನುವ ಹೆಬ್ಬಾಳ್ಕರ್ ಮರಾಠಿಗರ ಮತ್ತು ಎಂಇಎಸ್ ನವರ ಒಲೈಕೆಗೆ ಇಂತಹ ಹೇಳಿಕೆ ಕೊಡ್ತಾರಾ ಎಂಬ ಅನುಮಾನ ಕಾಡ್ತಿದೆ ಅಂತಾರೆ.