ಗದಗ: ಲಕ್ಕುಂಡಿ ಗ್ರಾಮದ ನಿವಾಸಿ ಪ್ರಜ್ವಲ್ ರಿತ್ತಿ ಅವರು ತೋರಿದ ಅಪಾರ ಪ್ರಾಮಾಣಿಕತೆಗೆ ಈಗ ದೊಡ್ಡ ಮಟ್ಟದ ಪ್ರತಿಫಲ ದೊರೆತಿದೆ. ಪ್ರಜ್ವಲ್ ಅವರು ತಮ್ಮ ಹಳೆಯ ಮನೆ ಕೆಡವಿ ಹೊಸ ಮನೆ ನಿರ್ಮಿಸುವ ಸಂದರ್ಭದಲ್ಲಿ ಭೂಮಿಯ ಅಡಿಯಲ್ಲಿ ಬಂಗಾರದ ನಾಣ್ಯಗಳಿದ್ದ ನಿಧಿ ಪತ್ತೆಯಾಗಿತ್ತು. ಅನಿರೀಕ್ಷಿತವಾಗಿ ಸಿಕ್ಕ ಈ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನವನ್ನು ತಮ್ಮಲ್ಲೇ ಇಟ್ಟುಕೊಳ್ಳದೆ, ಪ್ರಜ್ವಲ್ ಅತ್ಯಂತ ಜವಾಬ್ದಾರಿಯಿಂದ ಸರ್ಕಾರಕ್ಕೆ ಒಪ್ಪಿಸುವ ಮೂಲಕ ನಾಡಿನಾದ್ಯಂತ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರ ಈ ನಿಷ್ಠೆಯನ್ನು ಗುರುತಿಸಿ ಸಚಿವ ಎಚ್.ಕೆ. ಪಾಟೀಲ್ ಅವರು ಅಂದು ನೀಡಿದ್ದ ವಾಗ್ದಾನದಂತೆ ಇಂದು ಪ್ರಜ್ವಲ್ ಕುಟುಂಬಕ್ಕೆ ವಿಶೇಷ ಕೊಡುಗೆಗಳನ್ನು ಹಸ್ತಾಂತರಿಸಲಾಗಿದೆ.
ಪ್ರಾಮಾಣಿಕತೆಯ ಈ ಕಾರ್ಯವನ್ನು ಗೌರವಿಸಿ ಸರ್ಕಾರವು ಪ್ರಜ್ವಲ್ ಕುಟುಂಬಕ್ಕೆ ಸ್ವಂತ ನಿವೇಶನ ಜೊತೆಗೆ ₹5 ಲಕ್ಷ ರೂಪಾಯಿಗಳ ನಗದು ಬಹುಮಾನವನ್ನು ನೀಡಿದೆ. ಈ ನಿವೇಶನವನ್ನು ಪ್ರಜ್ವಲ್ ಅವರ ತಾಯಿ ಗಂಗವ್ವ ಅವರ ಹೆಸರಿಗೆ ಅಧಿಕೃತವಾಗಿ ನೋಂದಣಿ ಮಾಡಲಾಗಿದ್ದು, ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ಸ್ವಂತ ಸೂರಿಲ್ಲದ ಈ ಕುಟುಂಬಕ್ಕೆ ಈಗ ಸರ್ಕಾರದ ನೆರವಿನಿಂದ ನಿವೇಶನ ದೊರೆತಿರುವುದು ಪ್ರಜ್ವಲ್ ಮತ್ತು ಅವರ ಪೋಷಕರಲ್ಲಿ ಅತೀವ ಹರ್ಷ ತಂದಿದೆ. ಕಷ್ಟದ ಕಾಲದಲ್ಲೂ ಆಸೆಗೆ ಬಲಿಯಾಗದೆ ಪ್ರಾಮಾಣಿಕತೆ ಮೆರೆದರೆ ಅದಕ್ಕೆ ತಕ್ಕ ಪ್ರತಿಫಲ ಖಂಡಿತ ಸಿಗುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.


