ದೇಶದ ರಾಜಧಾನಿ ದೆಹಲಿಯ ಕರ್ತವ್ಯಪಥದಲ್ಲಿ ಜನವರಿ 26 ರಂದು ನಡೆಯುವ 76ನೇ ಗಣರಾಜ್ಯೋತ್ಸವ ಪರೇಡ್ ನಲ್ಲಿ ಪಾಲ್ಗೊಳ್ಳಲು ಕರ್ನಾಟಕದ ಲಕ್ಕುಂಡಿಯ ಜೈನ ದೇವಾಲಯದ ಸ್ತಬ್ಧ ಚಿತ್ರ ಆಯ್ಕೆಯಾಗಿದೆ. ಗದಗ ಜಿಲ್ಲೆಯ ಲಕ್ಕುಂಡಿಯು ಪ್ರಮುಖ ಜೈನ ಕೇಂದ್ರವಾಗಿದೆ. ಮಹಾವೀರ ಜೈನ ದೇವಾಲಯ ಇಲ್ಲಿನ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ. ಇದಲ್ಲದೆ ಲಕ್ಕುಂಡಿಯಲ್ಲಿ ಸುಮಾರು 50 ವಿವಿಧ ದೇವಾಲಯಗಳು ಇವೆ.
ಇವೆಲ್ಲವೂ 14ನೇ ಶತಮಾನಕ್ಕಿಂತ ಹಿಂದಿನವು. ಅವು ಶೈವ, ಜೈನ ಮತ್ತು ವೈಷ್ಣವ ಧರ್ಮಕ್ಕೆ ಸೇರಿದವು. ಕರ್ನಾಟಕದ ಲಕ್ಕುಂಡಿಯ ಸ್ತಬ್ಧಚಿತ್ರದೊಂದಿಗೆ ದೇಶದ 15 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸ್ತಬ್ಧಚಿತ್ರಗಳನ್ನು ಪರೇಡ್‌ನಲ್ಲಿ ಭಾಗವಹಿಸಲು ಆಯ್ಕೆ ಮಾಡಲಾಗಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಸಂಬಂಧ ಬುಧವಾರ ಮತ್ತೊಂದು ಸಭೆ ನಡೆಯಲಿದ್ದು, ಅಲ್ಲಿ ಸ್ತಬ್ಧ ಚಿತ್ರಗಳ ಆಯ್ಕೆ ಅಂತಿಮಗೊಳಿಸಿ ಪ್ರಕಟಿಸಲಾಗುವುದು ಅಧಿಕಾರಿಗಳು ತಿಳಿಸಿದ್ದಾರೆ. ಎಂದು ಕಳೆದ ವರ್ಷ ರಾಜ್ಯದ ಯಾವುದೇ ಸ್ತಬ್ದಚಿತ್ರವನ್ನು ಆಯ್ಕೆ ಮಾಡಿರಲಿಲ್ಲ. ಇದು ರಾಜ್ಯದ ಕಾಂಗ್ರೆಸ್ ಸರ್ಕಾರ ಹಾಗೂ ಕೇಂದ್ರದ ಎನ್‌ಡಿಎ ಸರ್ಕಾರದ ನಡುವೆ ತೀವ್ರ ಜಟಾಪಟಿಗೆ ಕಾರಣವಾಗಿತ್ತು.