ಮಾಗಡಿ ಪೊಲೀಸರ ಬಲೆಗೆ ಬಿದ್ದ ಲೇಡಿ ಗ್ಯಾಂಗ್!

ರಾಮನಗರ: ವಿಳಾಸ ಕೇಳುವ ನೆಪದಲ್ಲಿ ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಸರಣಿ ಸರಗಳ್ಳತನ ಮಾಡುತ್ತಿದ್ದ ಅಂತರಜಿಲ್ಲಾ ಕಳ್ಳರ ತಂಡವೊಂದನ್ನು ಮಾಗಡಿ ತಾಲೂಕಿನ ಕುದೂರು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ವಿಶೇಷವೆಂದರೆ ಈ ತಂಡದಲ್ಲಿ ಇಬ್ಬರು ಮಹಿಳೆಯರು ಭಾಗಿಯಾಗಿದ್ದು, ಕಾರಿನಲ್ಲಿ ಬಂದು ಕೈಚಳಕ ತೋರುತ್ತಿದ್ದರು.
ಬಂಧಿತರನ್ನು ಪ್ರಭು (39), ವಸಂತಿ (37) ಮತ್ತು ಜ್ಯೋತಿ (32) ಎಂದು ಗುರುತಿಸಲಾಗಿದೆ. ಮಾರ್ಚ್ 3 ರಂದು ಕುದೂರು ಸಮೀಪದ ಕಳ್ಳಿಪಾಳ್ಯದಲ್ಲಿ ಮುನೇಶ್ವರ ಸ್ವಾಮಿ ರಥೋತ್ಸವ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಭಕ್ತಾದಿಗಳು ದೇವಸ್ಥಾನದತ್ತ ಸಾಗುತ್ತಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿಗಳು, ವ್ಯಾಗನಾರ್ ಕಾರಿನಲ್ಲಿ ಬಂದು ಭಕ್ತರ ಬಳಿ ದೇವಸ್ಥಾನಕ್ಕೆ ಹೋಗುವ ದಾರಿ ಕೇಳಿದ್ದಾರೆ. ಭಕ್ತರು ವಿಳಾಸ ಹೇಳುವ ಲವಲವಿಕೆಯಲ್ಲಿದ್ದಾಗ, ಆರೋಪಿಗಳು ಕ್ಷಣಾರ್ಧದಲ್ಲಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದರು.

ಒಂದೇ ದಿನ ಮೂರು ಕಡೆಗಳಲ್ಲಿ ಇದೇ ಮಾದರಿಯಲ್ಲಿ ಕಳ್ಳತನ ನಡೆದಿದ್ದರಿಂದ ಎಚ್ಚೆತ್ತ ಕುದೂರು ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಖಚಿತ ಮಾಹಿತಿ ಹಾಗೂ ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಸುಮಾರು 112 ಗ್ರಾಂ ತೂಕದ ಮೂರು ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೃತ್ಯಕ್ಕೆ ಬಳಸಿದ್ದ ಮಾರುತಿ ವ್ಯಾಗನಾರ್ ಕಾರನ್ನು ಪೊಲೀಸರು ಸೀಜ್ ಮಾಡಿದ್ದಾರೆ.
ಪೊಲೀಸರ ವಿಚಾರಣೆಯಿಂದ ಈ ಗ್ಯಾಂಗ್ ಕೇವಲ ಕುದೂರು ಮಾತ್ರವಲ್ಲದೆ, ವಿವಿಧೆಡೆ ಒಟ್ಟು 7 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಅಪರಿಚಿತರು ದಾರಿ ಕೇಳುವ ನೆಪದಲ್ಲಿ ಹತ್ತಿರ ಬಂದಾಗ ಜಾಗರೂಕರಾಗಿರಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.




