ತುಮಕೂರು: ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಕುಳಿನಂಜಯ್ಯನ ಪಾಳ್ಯದಲ್ಲಿ ಕಳೆದ ಶುಕ್ರವಾರ ರಾತ್ರಿ ನಡೆದಿದ್ದ ಅತಿಥಿ ಶಿಕ್ಷಕ ಮರಿಯಪ್ಪ ಅವರ ಬರ್ಬರ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅವರನ್ನು ಕೊಲ್ಲಿಸಿದ್ದು ಬೇರೆ ಯಾರೂ ಅಲ್ಲ, ಅವರ ಹೆಂಡತಿ ಮತ್ತು ಮಗಳು. ಅವರು ಸುಪಾರಿ ಕೊಟ್ಟು ಈ ಕೊಲೆ ಮಾಡಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಮರಿಯಪ್ಪ ಅವರು ಕಳೆದ ಶುಕ್ರವಾರ ರಾತ್ರಿ ಮನೆಯಿಂದ ಸ್ವಲ್ಪ ದೂರದಲ್ಲಿರುವ ತಮ್ಮ ಹೊಲದ ಭಾಗದಲ್ಲಿ ಅಮಾವಾಸ್ಯೆ ಪೂಜೆಗೆ ಹೋಗಿದ್ದರು. ಅವರು ಮಧ್ಯ ರಾತ್ರಿ ಕಳೆದ ಬಳಿಕ ಮರಳಿದ್ದು, ಆ ವೇಳೆಯಲ್ಲಿ ಗದ್ದೆಯಲ್ಲಿ ತಲೆಯನ್ನೇ ಗುರಿಯಾಗಿಟ್ಟು ಕೊಚ್ಚಿ ಕೊಲೆ ಮಾಡಲಾಗಿತ್ತು. ದಾರಿಯಲ್ಲಿ ನಡೆದುಬರುತ್ತಿದ್ದಾಗ ದುಷ್ಕರ್ಮಿಗಳು ಅವರನ್ನು ತಡೆದು ಅಲ್ಲೇ ಕೆಡವಿ ಕೊಲೆ ಮಾಡಿದ್ದು ಮೇಲ್ನೋಟಕ್ಕೆ ಸ್ಪಷ್ಟವಾಗಿತ್ತು. ಯಾರೂ ವಿರೋಧಿಗಳಿಲ್ಲದ ಅವರ ಕೊಲೆಗೆ ಕಾರಣವೇನು ಎಂದು ತನಿಖೆ ನಡೆಸಿದಾಗ ಪೊಲೀಸರಿಗೆ ಅಚ್ಚರಿ ಕಾದಿತ್ತು.
ಶುಕ್ರವಾರ ಮುಂಜಾನೆಯ ಹೊತ್ತು ನಡೆದಿದ್ದ ಕೊಲೆಯ ವಿಚಾರ ತಿಳಿಯುತ್ತಿದ್ದಂತೆಯೇ ಹೆಂಡತಿ ಶೋಭಾ, ಮಗಳು ಹೇಮಲತಾ ದೌಡಾಯಿಸಿ ಬಂದಿದ್ದರು. ಈ ಕೊಲೆಯ ಬಗ್ಗೆ ಸರಿಯಾದ ತನಿಖೆ ನಡೆಯಬೇಕು, ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದರು. ಆದರೆ, ಕೊನೆಗೆ ಸಂಶಯದ ಮೊಳೆ ಅವರ ಬಳಿಯೇ ಹೋಗಿ ನಿಂತಿತು.
ನಿಜವೆಂದರೆ, ಈ ಕೊಲೆಯ ಹಿಂದಿರುವುದು ಯಾವುದೇ ದ್ವೇಷವಲ್ಲ ಬದಲಾಗಿ ಮರಿಯಪ್ಪ ಅವರ ಮಗಳು ಹೇಮಲತಾಳ ಪ್ರೇಮ ಪ್ರಕರಣ. ಹೇಮಲತಾ ಅದೇ ಗ್ರಾಮದ ಶಾಂತ ಕುಮಾರ್ ಎಂಬಾತನನ್ನು ಪ್ರೀತಿಸಿದ್ದಳು. ಆದರೆ, ಇದು ಮರಿಯಪ್ಪ ಅವರಿಗೆ ಇಷ್ಟವಿರಲಿಲ್ಲ. ಹಿಂದೊಮ್ಮೆ ಈ ಸಂಬಂಧ ಶಾಂತ ಕುಮಾರ್‌ಗೆ ಮರಿಯಪ್ಪ ಥಳಿಸಿದ್ದರು.
ಇದರಿಂದ ಶಾಂತಕುಮಾರ್ ಗೆ ಮರಿಯಪ್ಪ ಮೇಲೆ ದ್ವೇಷ ಹೆಚ್ಚಾಗಿತ್ತು. ಶಾಂತ ಕುಮಾರ್ ಮೇಲೆ ಹಲ್ಲೆ ಮಾಡಿದ್ದರಿಂದ ಹೇಮಲತಾ ಮತ್ತು ತಾಯಿ ಶೋಭಾಗೂ ಮರಿಯಪ್ಪ ಮೇಲೆ ಸಿಟ್ಟಿತ್ತು. ಹೀಗಾಗಿ ಸ್ನೇಹಿತರ ಜೊತೆಗೂಡಿ ಮರಿಯಪ್ಪ ಕೊಲೆಗೆ ಶಾಂತ ಕುಮಾರ್ ರೂಪಿಸಿದ ಸಂಚಿಗೆ ಬೆಂಬಲ ನೀಡಿದ್ದರು.
ಶಾಂತಕುಮಾರ್ ಈ ಕೊಲೆಗಾಗಿ ಬೆಂಗಳೂರಿನಲ್ಲಿ ವಾಸವಿದ್ದ ತನ್ನ ಸ್ನೇಹಿತರಾದ ಸಂತು, ಹೇಮಂತ್ ಗೆ ಕೊಲೆ ಸುಪಾರಿ ನೀಡಿದ್ದ. ಹೇಮಂತ್ ಮೂವರು ಬಾಲಕರನ್ನು ಬಳಸಿಕೊಂಡು ಕೊಲೆ ಮಾಡಿದ್ದಾನೆ.
ಕೊಲೆಯ ದಿನ ಮರಿಯಪ್ಪನ ಚಲನ ವಲನಗಳ ಬಗ್ಗೆ ಮಾಹಿತಿ ನೀಡಿದ್ದೇ ಈ ತಾಯಿ-ಮಗಳು. ಮರಿಯಪ್ಪ ಅಮವಾಸ್ಯೆ ಪೂಜೆ ಮುಗಿಸಿ ವಾಪಸ್ ಗ್ರಾಮಕ್ಕೆ ಬರುತ್ತಿದ್ದ ಮಾಹಿತಿಯನ್ನು ಶಾಂತಕುಮಾರ್ ಗೆ ಹೇಳಿದ್ದರು. ಮರಿಯಪ್ಪ ಗ್ರಾಮದ ಬಳಿ ಬರುವ ಸಂದರ್ಭದಲ್ಲಿ ಶಾಂತ ಕುಮಾರ್ ಮತ್ತು ಟೀಮ್ ಮರಿಯಪ್ಪ ಅವರ ಬೈಕ್ ಅಡ್ಡಗಟ್ಟಿ ಮುಖಕ್ಕೆ ಪೆಪ್ಪರ್ ಸ್ಪ್ರೇ ಹೊಡೆದಿದ್ದರು.
ಗಾಬರಿಗೊಂಡ ಮರಿಯಪ್ಪ ಬೈಕ್ ನಿಂದ ಕೆಳಗಿಳಿದು ಓಡಿ ಹೋಗಿದ್ದರು. ಬೆನ್ನಟ್ಟಿ ಹೋದ ಪಾತಕಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಇದೀಗ ಪೊಲೀಸರು ಶಾಂತ ಕುಮಾರ್, ಸಂತು, ಹೇಮಂತ್, ಶೋಭಾ, ಹೇಮಲತಾ ಹಾಗೂ ಮೂವರು ಬಾಲಕರನ್ನು ವಶಕ್ಕೆ ಪಡೆಯಲಾಗಿದೆ. ಒಟ್ಟು 8 ಜನರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ. ಹೇಮಲತಾ ಪ್ರೇಮ ಪ್ರಕರಣದ ಜಾಡು ಹಿಡಿದು ತನಿಖೆ ನಡೆಸಿದ್ದಾಗ ಕೊಲೆ ಪ್ರಕರಣ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕುಣಿಗಲ್ ಪೊಲೀಸರಿಂದ ತನಿಖೆ ಮುಂದುವರಿದಿದೆ.