ಕೋಲಾರ : ಕೋಲಾರ ಹಾಲು ಒಕ್ಕೂಟದ 81 ಖಾಲಿ ಹುದ್ದೆಗಳಿಗೆ ನಡೆಯುತ್ತಿರುವ ನೇರ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಸುದ್ದಿ ಹರಿದಾಡುತ್ತಿದೆ. ಹುದ್ದೆಗಳನ್ನು ಲಕ್ಷ ಲಕ್ಷ ಹಣಕ್ಕೆ ಮಾರಾಟ ಮಾಡಿರುವ ಅನುಮಾನ ವ್ಯಕ್ತವಾಗಿದ್ದು, ಒಕ್ಕೂಟದ ಅಧ್ಯಕ್ಷರ ಸಹಿತ ನಿರ್ದೇಶಕರು ಮತ್ತು ಅಧಿಕಾರಿಗಳು ಉದ್ದೇಶಿತ ಭರ್ತಿಯಾಗಲಿರುವ ಹುದ್ದೆಗಳನ್ನು ಹಂಚಿಕೊಂಡಿದ್ದಾರೆ. ಕಾಂಗ್ರೆಸ್‌ ಹಾಲಿ ಮತ್ತು ಮಾಜಿ ಶಾಸಕರೂ ಕೂಡಾ ಈ ಹುದ್ದೆಗಳ ಪರೀಕ್ಷೆ ಬರೆದು, ಸಂದರ್ಶನ ಎದುರಿಸುತ್ತಿರುವ ಅಭ್ಯರ್ಥಿಗಳ ಅಂತಿಮ ಪಟ್ಟಿ ಎಂದು ಹೇಳಲಾಗುವ ಸಂಭವನೀಯ ಪಟ್ಟಿ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ.



ಕೋಲಾರದ ಹಾಲು ಒಕ್ಕೂಟದಲ್ಲಿನ ಮಂಜೂರಾದ ವಿವಿಧ ಹುದ್ದೆಗಳ ಪೈಕಿ 273 ಹುದ್ದೆಗಳಿಗೆ ಕಳೆದ ಸೆಪ್ಟೆಂಬರ್‌ನಲ್ಲಿ ಮೂರು ಹಂತದಲ್ಲಿ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಆದರೆ, ಕೋಮುಲ್ ಪ್ರಕಟಿಸಿದ್ದ ಎರಡು ಅಧಿಸೂಚನೆಗಳಲ್ಲಿದ್ದ ಹುದ್ದೆಗಳ ನೇಮಕಾತಿಗೆ ಹೈಕೋರ್ಟ್ ತಡೆಯಾಜ್ಞೆಯನ್ನು ಕೊಟ್ಟಿದೆ. ಉಳಿದ 81 ಹುದ್ದೆಗಳಿಗೆ ನವೆಂಬರ್ 11 ರಂದು ಕೋಲಾರದ ವಿವಿಧ ಕಾಲೇಜುಗಳಲ್ಲಿ ಲಿಖಿತ ಪರೀಕ್ಷೆಯನ್ನು ನಡೆಸಲಾಗಿದೆ. ಆದರೆ ಲಿಖಿತ ಪರೀಕ್ಷೆಯ ಫಲಿತಾಂಶವನ್ನು ಕೋಮುಲ್ ಅಧಿಕಾರಿ ವರ್ಗವು ಇದುವರೆಗೂ ನಾಮಫಲಕದಲ್ಲಿ ಪ್ರಕಟಿಸಿಲ್ಲ.

ಅಭ್ಯರ್ಥಿಗಳು ಗಳಿಸಿದ ಅಂಕಗಳನ್ನು ಅಭ್ಯರ್ಥಿಗಳ ಇ-ಮೇಲ್ ವಿಳಾಸಕ್ಕೆ ಕಳುಹಿಸಲಾಗಿದ್ದು ಲಿಖಿತ ಪರೀಕ್ಷಾ ಫಲಿತಾಂಶವು ಪ್ರಕಟವಾದ ನಂತರ ಡಿಸೆಂಬರ್ 14, 15, 16 ಮತ್ತು 18 ರಂದು ಈ ಎಲ್ಲ 81 ಹುದ್ದೆಗೆಳಿಗೆ ನೇರ ನೇಮಕಾತಿ ಸಮಿತಿಯ ಸದಸ್ಯರು ಸಂದರ್ಶನ ನಡೆಸಿದ್ದಾರೆ, ಲಿಖಿತ ಮತ್ತು ಮೌಖಿಕ ಪರೀಕ್ಷೆಗಳು ನಡೆಯುವ ಮುನ್ನವೇ ಆಯ್ಕೆಯಾಗುವ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಕೋಮುಲ್ ಸಿದ್ದಪಡಿಸಿದೆ ಎಂಬ ಆರೋಪ ಕೇಳಿಬಂದಿದೆ , ಆಯ್ಕೆಯಾಗುವ ಅಭ್ಯರ್ಥಿಗಳ ಹೆಸರು ಮತ್ತು ಯಾವ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂದು ಶಿಫಾರಸ್ಸು ಮಾಡಿರುವುದು ಕಂಡುಬಂದಿದೆ .

ಹಾಲಿ ಶಾಸಕ, ಮಾಜಿ ಶಾಸಕ ಸೇರಿದಂತೆ ಒಕ್ಕೂಟದ ನಿರ್ದೇಶಕರ ಹೆಸರುಗಳನ್ನು ಸ್ಪಷ್ಟವಾಗಿ ನಮೂದಿಸಿರುವುದು ಈ ಪಟ್ಟಿಯಲ್ಲಿ ಕಂಡು ಬಂದಿದ್ದು, ಸದ್ಯಕ್ಕೆ ಈ ಪಟ್ಟಿಯು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಭ್ಯರ್ಥಿಗಳ ನೇರ ನೇಮಕಾತಿ ಆಯ್ಕೆ ಸಮಿತಿಗೆ ನಿರ್ದೇಶಕ ಕೆಎನ್.ನಾಗರಾಜ ಅಧ್ಯಕ್ಷರಾಗಿದ್ದಾರೆ. ಕೋಮುಲ್‌ನ ಅಧ್ಯಕ್ಷ ಕೆವೈ ನಂಜೇಗೌಡ, ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿ, ಕೆಎಂಎಫ್ ನಿರ್ದೇಶಕ ಸುರೇಶ ಹಾಗೂ ಸಹಕಾರ ಇಲಾಖೆಯವರು ಸದಸ್ಯರಾಗಿದ್ದಾರೆ.

 ಕೋಲಾರ ಹಾಲು ಒಕ್ಕೂಟದ ನೇಮಕಾತಿ ನಿಷ್ಪಕ್ಷಪಾತವಾಗಿ ನಡೆದಿಲ್ಲ ಎಂಬುದು ಸಾರ್ವಜನಿಕರ ವಾದವಾಗಿದ್ದು , ಸಂಪೂರ್ಣ ತನಿಖೆಯಿಂದ ಭ್ರಷ್ಟಾಚಾರ ಹೊರಬರಬೇಕಾಗಿದ್ದು , ಘಟಾನುಘಟಿ ನಾಯಕರ ಹೆಸರು ಕೇಳಿಬರುತ್ತಿದ್ದು ಸತ್ಯಾಂಶ ಯಾವ ರೀತಿ ಹೊರಬರುತ್ತದೆ ಎಂಬುದು ಕಾದು ನೋಡಬೇಕಾಗಿದೆ.

By admin

Leave a Reply

Your email address will not be published. Required fields are marked *

Verified by MonsterInsights