Thursday, January 29, 2026
18 C
Bengaluru
Google search engine
LIVE
ಮನೆಜಿಲ್ಲೆಲಕ್ಷ್ಮಣನ ಬಾಣದಿಂದ ಸೃಷ್ಟಿಯಾದ ಕೊಡಗಿನ ಜಲಧಾರೆ!

ಲಕ್ಷ್ಮಣನ ಬಾಣದಿಂದ ಸೃಷ್ಟಿಯಾದ ಕೊಡಗಿನ ಜಲಧಾರೆ!

ಮಡಿಕೇರಿ: ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರ ಉದ್ಘಾಟನೆಗೆ ಕೇವಲ ಎರಡು ದಿನಗಳು ಮಾತ್ರ ಬಾಕಿ ಇದೆ. ಈ ಹೊತ್ತಿನಲ್ಲಿ ದೇಶದಾದ್ಯಂತ ರಾಮನ ವಿಶೇಷತೆ ಮತ್ತು ಆತ ಬಿಟ್ಟು ಹೋದ ಹೆಜ್ಜೆಗುರುತುಗಳನ್ನು ಪರಿಚಯಿಸುವ ಕೆಲಸಗಳು ನಡೆಯುತ್ತಿವೆ.

ಈ ಹಿನ್ನೆಲೆ ಕೊಡಗು ಜಿಲ್ಲೆಗೂ ಶ್ರೀರಾಮನಿಗೂ ಅವಿನಾಭಾವ ಸಂಬಂಧವಿದೆ ಎಂದು ತಿಳಿದುಬಂದಿದೆ. ವನವಾಸದ ಕಾಲದಲ್ಲಿ ಸೀತೆಯನ್ನು ಅರಸುತ್ತಾ ಕೊಡಗಿಗೆ ಲಕ್ಷ್ಮಣ ಸಹ ಶ್ರೀರಾಮನ ಜೊತೆಗೆ ಬಂದಿದ್ದ ಎಂಬ ಐತಿಹ್ಯ ಇದೆ. ಅಷ್ಟೇ ಅಲ್ಲದೇ ಲಕ್ಷ್ಮಣನ ಬಾಣದಿಂದ ಸೃಷ್ಟಿಯಾದ ಜಲವೇ ಇವತ್ತು ಕೊಡಗಿನಿಂದ ಹರಿದು ಬಂದು ಕಾವೇರಿಯನ್ನು ಸೇರುವ ಲಕ್ಷ್ಮಣ ತೀರ್ಥ ನದಿ ಎಂದು ಜನ ನಂಬಿದ್ದಾರೆ.

ಕೊಡಗಿನ ಮಟ್ಟಿಗೆ ಪ್ರಮುಖ ದೈವ ತಾಣ ಮತ್ತು ಪ್ರವಾಸಿ ತಾಣಗಳಲ್ಲೊಂದಾದ ಇರ್ಪು ಕ್ಷೇತ್ರ ರಾಮ ಭೇಟಿ ನೀಡಿದ ತಾಣವಾಗಿದೆ. ಇಲ್ಲಿ ರಾಮ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಿದ್ದನಂತೆ. ಸೀತೆಯನ್ನು ಅರಸುತ್ತಾ ವಾನರಾದಿಯಾಗಿ ಹೊರಟ ರಾಮ-ಲಕ್ಷ್ಮಣರು ಬ್ರಹ್ಮಗಿರಿಯ ತಪ್ಪಲಿಗೆ ಬರುತ್ತಾರೆ. ಈ ಬೆಟ್ಟ ದಾಟಿದರೆ ಕೇರಳ ಸೀಮೆ ಎದುರಾಗುತ್ತದೆ. ಎಲ್ಲರೂ ಬೆಟ್ಟಗುಡ್ಡಗಳನ್ನು ದಾಟಿ ಮುನ್ನಡೆಯುತ್ತಿದ್ದಾರೆ. ಲಕ್ಷ್ಮಣ ಮಾತ್ರ ಮುಂದಕ್ಕೆ ಹೆಜ್ಜೆಯಿರಿಸದೇ ಅಲ್ಲಿಯೇ ಕುಳಿತುಕೊಂಡನಂತೆ. ಎಂದೂ ಕೂರದ ರಾಮ ಅಂದು ಕುಳಿತ ಸ್ಥಳವನ್ನು ಇರ್ಪು ಎನ್ನಲಾಗಿದೆ.

ಇದಾದ ಬಳಿಕ ತನ್ನ ವರ್ತನೆಗೆ ಬೇಸರಗೊಂಡ ಆತ, ಅಣ್ಣ ಶ್ರೀರಾಮನಿಗೆ ಬೇಸರ ಮಾಡಿಬಿಟ್ಟೆ ಎಂಬ ನೋವಿನಲ್ಲಿ ಅಗ್ನಿಕುಂಡ ನಿರ್ಮಿಸಿ ಅದರಲ್ಲಿ ಆತ್ಮಾಹುತಿ ಮಾಡಲು ನಿರ್ಧರಿಸಿದನಂತೆ. ಇದನ್ನು ಕಂಡ ರಾಮ ಆತನಿಗೆ ಸಮಾಧಾನ ಹೇಳಿದ. ನಂತರ ಸಂತಸಗೊಂಡ ಲಕ್ಷ್ಮಣ ತಾನು ನಿರ್ಮಿಸಿದ ಅಗ್ನಿಕುಂಡವನ್ನು ನಂದಿಸಲು ಬಾಣಬಿಟ್ಟನಂತೆ. ಹಾಗೆ ಬಿಟ್ಟ ಬಾಣ ಜಲಧಾರೆಯನ್ನು ಸೃಷ್ಟಿಸಿ ಅಗ್ನಿಕುಂಡವನ್ನು ನಂದಿಸಿತು ಎಂಬ ಪ್ರತೀತಿಯಿದೆ. ಅಂದು ಲಕ್ಷ್ಮಣ ಸೃಷ್ಟಿಸಿದ ಜಲಧಾರೆಯೇ ಇಂದಿನ ಇರ್ಪು ಜಲಧಾರೆಯಾಗಿದ್ದು, ಇದಕ್ಕೆ ರಾಮನೇ ಲಕ್ಷ್ಮಣತೀರ್ಥವೆಂದು ಹೆಸರಿಸಿದ ಎಂಬುದು ಎಲ್ಲರ ನಂಬಿಕೆಯಾಗಿದೆ. ಇರ್ಪುವಿನಲ್ಲಿರುವ ರಾಮೇಶ್ವರ ದೇವಾಲಯ ಕೇರಳಿಗರ ವಾಸ್ತುಶಿಲ್ಪದೊಂದಿಗೆ ವೃತ್ತಾಕಾರದ ಗರ್ಭಗುಡಿಯನ್ನು ಹೊಂದಿದೆ. ಇಂದಿಗೂ ಕರ್ನಾಟಕ, ಕೇರಳದ ಜನರು ಬಂದು ಈ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments