ಮಡಿಕೇರಿ: ಪ್ರವಾಹ ಹಾಗೂ ಮಳೆ ಹಾನಿಯಿಂದ ತತ್ತರಿಸಿರುವ ಜಿಲ್ಲೆಗೆ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ, ಮಳೆ ಹಾನಿ ಪ್ರದೇಶಗಳನ್ನು ವೀಕ್ಷಣೆ ಮಾಡಲಿದ್ದಾರೆ.
ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಆಗಿರುವ ಅನಾಹುತಗಳ ಮಾಹಿತಿ ಪಡೆದು ಮುನ್ನೆಚ್ಚರಿಕೆ ಮತ್ತು ಪರಿಹಾರ ಕ್ರಮಗಳ ಬಗ್ಗೆ ಪರಿಶೀಲಿಸಲು ಬುಧವಾರ ಕಂದಾಯ ಸಚಿವ ಕೃಷ್ಣಬೈರೇಗೌಡ ಮತ್ತು ಜಿಲ್ಲಾಉಸ್ತುವಾರಿ ಸಚಿವ ಬೋಸರಾಜು ಭೇಟಿ ನೀಡಿದ್ದರು. ಇದಾದ ಬೆನ್ನಲ್ಲಿ ಈಗ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಡಗಿಗೆ ಭೇಟಿ ನೀಡಲಿದ್ದು ಪರಿಸ್ಥಿತಿ ಅವಲೋಕಿಸಲಿದ್ದಾರೆ.
ಬಳಿಕ ಸಿಎಂ ಮಡಿಕೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಜಿಲ್ಲೆಯಲ್ಲಿ ಜೂನ್ ಮತ್ತು ಜುಲೈ ತಿಂಗಳಲ್ಲಿ ಸುರಿದ ಮಳೆಯಿಂದ ಭಾರೀ ನಷ್ಟ ಸಂಭವಿಸಿದೆ. ಜಿಲ್ಲೆಯ ನದಿ ತೀರದ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದ್ದು, ಹಲವೆಡೆ ಭೂಕುಸಿತ ಸಂಭವಿಸಿದೆ.
ಜಿಲ್ಲೆಯಲ್ಲಿ 10 ಕಾಳಜಿ ಕೇಂದ್ರಗಳನ್ನು ಆರಂಭಿಸಲಾಗಿದ್ದು, ಸುಮಾರು 200 ಮಂದಿ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಇಲ್ಲಿಯವರೆಗೆ ಸಂಭವಿಸಿರುವ ಅನಾಹುತಗಳನ್ನು ವೀಕ್ಷಿಸಲಿರುವ ಮುಖ್ಯಂತ್ರಿ ಅಧಿಕಾರಿಗಳೊಂದಿಗೆ ಪರಿಹಾರ ಕಾರ್ಯಗಳು ಮತ್ತು ಮುಂದಿನ ಮುಂಜಾಗೃತಾ ಕ್ರಮಗಳ ಬಗ್ಗೆ ಚರ್ಚಿಸಲಿದ್ದಾರೆ. ಜಿಲ್ಲಾಉಸ್ತುವಾರಿ ಸಚಿವ ಬೋಸರಾಜು ಮುಖ್ಯಮಂತ್ರಿಗಳೊಂದಿಗಿರಲಿದ್ದಾರೆ.