ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ಮಸೀದಿಯ ಆವರಣಕ್ಕೆ ಹಿಂದೂಜನರು ನುಗ್ಗಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದ ಇಬ್ಬರು ವ್ಯಕ್ತಿಗಳ ವಿರುದ್ಧದ ದಾಖಲಾಗಿದ್ದ, ಪ್ರಕರಣವನ್ನು ಕರ್ನಾಟಕದ ಹೈಕೋರ್ಟ್ ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಪ್ರಕರಣ ರದ್ದು ಕೋರಿ ಪುತ್ತೂರಿನ ಬಿಳಿನೆಲೆ ಗ್ರಾಮದ ಕೀರ್ತನ್ ಮತ್ತು ಮಂಗಳೂರಿನ ಕೈಕಂಬದ ಸಚಿನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಈ ಆದೇಶ ನೀಡಿದೆ.
”ದೂರುದಾರರು ಖುದ್ದು ಹೇಳಿರುವಂತೆ ಆ ಭಾಗದಲ್ಲಿ ಹಿಂದೂ – ಮುಸ್ಲಿಮರು ಒಟ್ಟಾಗಿ ಸೌರ್ಹಾದತೆಯಿಂದ ಜೀವಿಸುತ್ತಿರುವುದಾಗಿ ಹೇಳಿಕೆ ನೀಡಿದ್ದಾರೆ. ಆದರೆ, ಅರ್ಜಿದಾರರ ವಿರುದ್ಧ ಐಪಿಸಿ ಸೆಕ್ಷನ್ 295 ‘ಎ’ ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಜೈ ಶ್ರೀರಾಮ್ ಎಂದು ಘೋಷಣೆ ಕೂಗುವುದು ಧಾರ್ಮಿಕ ಭಾವನೆಗೆ ಹೇಗೆ ಧಕ್ಕೆಯಾಗುತ್ತದೆಂದು ಅರ್ಥವಾಗುತ್ತಿಲ್ಲ. ಜತೆಗೆ, ಪ್ರಕರಣದಲ್ಲಿ ಯಾವುದೇ ಅಪರಾಧ ಕಂಡು ಬರುತ್ತಿಲ್ಲ. ಹಾಗಾಗಿ, ಅರ್ಜಿದಾರರ ವಿರುದ್ಧ ಮುಂದಿನ ಪ್ರಕ್ರಿಯೆಗಳಿಗೆ ಅನುಮತಿ ನೀಡುವುದು ಕಾನೂನಿನ ಪ್ರಕ್ರಿಯೆಯ ದುರುಪಯೋಗವಾಗುತ್ತದೆ,” ಎಂದು ಅಭಿಪ್ರಾಯಪಟ್ಟಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕು ಐತ್ತೂರು ಗ್ರಾಮದ ಮರ್ಧಾಳ ಎಂಬಲ್ಲಿ ಬದ್ರಿಯಾ ಜುಮ್ಮಾ ಮಸೀದಿಯ ಆವರಣದಲ್ಲಿ ಸೆ. 24 ರಂದು ರಾತ್ರಿ ಆರೋಪಿಗಳು ಜೈ ಶ್ರೀರಾಮ್ ಘೋಷಣೆ ಕೂಗಿದ್ದು, ಬ್ಯಾರಿಗಳನ್ನು ಬದುಕಲು ಬಿಡುವುದಿಲ್ಲ ಎಂದು ಬೊಬ್ಬೆ ಹಾಕಿದ್ದಾರೆಂದು ಆರೋಪಿಸಿ ಮಸೀದಿ ಸಿಬ್ಬಂದಿ ಕಡಬ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.
ಆ ದೂರಿನ ಅನ್ವಯ ಆರೋಪಿಗಳಿಬ್ಬರ ವಿರುದ್ಧ ಸೆಕ್ಷನ್ 447 (ಕ್ರಿಮಿನಲ್ ಅತಿಕ್ರಮಣಕ್ಕೆ ಶಿಕ್ಷೆ), 505 (ಸಾರ್ವಜನಿಕ ಕಿರುಕುಳಕ್ಕೆ ಕಾರಣವಾಗುವ ಹೇಳಿಕೆಗಳು), 506 (ಕ್ರಿಮಿನಲ್ ಬೆದರಿಕೆಗೆ ಶಿಕ್ಷೆ), 34 (ಸಾಮಾನ್ಯ ಉದ್ದೇಶ) ಮತ್ತು 295 ‘ಎ’ ಸೇರಿ ವಿವಿಧ ಐಪಿಸಿ ಅಪರಾಧಗಳಡಿ ಪ್ರಕರಣ ದಾಖಲಿಸಲಾಗಿತ್ತು. ಅದನ್ನು ರದ್ದು ಕೋರಿ ಅರ್ಜಿದಾರರು ರಾಜ್ಯ ಹೈಕೋರ್ಟ್ ಮೆಟ್ಟಿಲೇರಿದ್ದರು.