ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷಾ ವರದಿ ಇದೇ ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಲಿದೆ.
ಬಹಳಷ್ಟು ತಳ ಸಮುದಾಯಗಳು ಸ್ವಾಗತಿಸಿರುವ ಹಾಗೂ ಮೇಲ್ವರ್ಗದ ಲಿಂಗಾಯಿತ ಮತ್ತು ಒಕ್ಕಲಿಗ ಸಮುದಾಯಗಳು ಪ್ರಬಲವಾಗಿ ವಿರೋಧಿಸಿರುವ ಜಾತಿ ಗಣತಿ ವರದಿ ವಿಚಾರದಲ್ಲಿ ಸರಕಾರ ಯಾವ ಹೆಜ್ಜೆ ತುಳಿಯಬೇಕು ಎಂಬುದು ಸಂಪುಟದಲ್ಲಿ ತೀರ್ಮಾನವಾಗಲಿದೆ.
ಸಮೀಕ್ಷಾ ವರದಿ ಸಮರ್ಪಕವಾಗಿಲ್ಲ ಮತ್ತು ದಶಕಗಳ ಹಿಂದಿನ ದತ್ತಾಂಶ ಆಧರಿಸಿದ ಇದು ವೈಜ್ಞಾನಿಕವೂ ಅಲ್ಲಎಂಬ ವಾದದ ಹಿನ್ನೆಲೆಯಲ್ಲಿಸರಕಾರ ಏಕಾಏಕಿ ವರದಿಯನ್ನು ಅಂಗೀಕರಿಸುವ ಸ್ಥಿತಿ ಇಲ್ಲ. ಅಂತೆಯೇ, ಮಹತ್ವದ ಆಶಯದೊಂದಿಗೆ ಒಟ್ಟು 169 ಕೋಟಿ ರೂ. ವೆಚ್ಚದಲ್ಲಿಸಿದ್ದಪಡಿಸಿರುವ ವರದಿಯನ್ನು ನೇಪಥ್ಯದಲ್ಲಿಉಳಿಸಲೂ ಸಾಧ್ಯವಿಲ್ಲ. ಸರಕಾರದ ಪಾಲಿಗೆ ಬಿಸಿತುಪ್ಪವೇ ಆಗಿರುವ ಈ ವರದಿ ವಿಚಾರದಲ್ಲಿಸಂಪುಟ ಯಾವ ನಿರ್ಧಾರಕ್ಕೆ ಬರಲಿದೆ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಸಚಿವ ಸಂಪುಟ ಉಪ ಸಮಿತಿ ರಚನೆ
ಸದ್ಯಕ್ಕೆ ವರದಿಯನ್ನು ಅಂಗೀಕರಿಸುವ ಸವಾಲನ್ನು ಮೈಮೇಲೆ ಎಳೆದುಕೊಳ್ಳಲು ಸರಕಾರ ಸಿದ್ಧವಿಲ್ಲ. ವರದಿಯನ್ನು ಪರಾಮರ್ಶಿಸಿ ವರದಿ ನೀಡಲು ಸಚಿವ ಸಂಪುಟ ಉಪ ಸಮಿತಿ ರಚನೆ ಮಾಡುವ ಸಾಧ್ಯತೆಗಳು ಹೆಚ್ಚು ಎಂದು ಮೂಲಗಳು ಹೇಳಿವೆ.