ಬೆಂಗಳೂರು: ಬೈ ಎಲೆಕ್ಷನ್ ಪ್ರಚಂಡ ಗೆಲುವಿನ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸಿಎಂ ಗಾದಿ ಕನಸಿಗೆ ಮತ್ತೆ ರೆಕ್ಕೆಪುಕ್ಕ ಬಂದಿದೆ. ಚನ್ನಪಟ್ಟಣ ಕ್ಷೇತ್ರ ಗೆದ್ದರು ಸಾಕು ಎಂದು ಕೊಂಡಿದ್ದ ಡಿಕೆಶಿ ಬೆಂಬಲಿಗರು ಮತ್ತೆರೆಡು ಕ್ಷೇತ್ರಗಳ ಗೆಲುವಿನಿಂದ ಉರಿದುಂಬಿಯಂತಾಗಿದ್ದಾರೆ. ಈ ದಿಗ್ವಿಜಯವನ್ನು ಹೈಕಮಾಂಡ್ ಗಮನಿಸಿಯೇ ಗಮನಿಸುತ್ತದೆ. ನಮ್ಮ ಸಾಹೇಬರು ಸಿಎಂ ಆಗುವುದು ನಿಕ್ಕಿ ಎಂದು ಡಿಕೆಶಿ ಬೆಂಬಲಿಗರು ಸಂಭ್ರಮಿಸುತ್ತಿದ್ದಾರೆ. ಪಕ್ಷದ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಹಗಲಿರುಳು ಶ್ರಮಿಸಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ.
ಸರ್ಕಾರದ ಹಲವು ಮಂತ್ರಿಗಳ ವಿರುದ್ಧ ಆರೋಪಗಳು ಬಂದವು. ಹಲವು ನಕರಾತ್ಮಕ ಅಂಶಗಳಿಗೆ ಸರ್ಕಾರ ತಲೆಕೊಡಬೇಕಾಯಿತು. ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಮುಡಾ ಆರೋಪ ಬಂದಾಗಲೂ ಜಾಣ್ಮೆಯಿಂದ ಡಿಕೆಶಿ ಸಿಎಂ ಪರ ನಿಂತರು. ವಿವಿಧೆಡೆ ಟಿಕೆಟ್ ಬಂಡಾಯ ಬೆನ್ನು ಬಿದ್ದಿತ್ತು. ಚನ್ನಪಟ್ಟಣದಲ್ಲಿ ಅಭ್ಯರ್ಥಿಯೇ ಇಲ್ಲ ಎಂಬ ವಾತಾವರಣ ನಿರ್ಮಾಣವಾಗಿತ್ತು. ಇಂತಹ ಹೊತ್ತಲ್ಲಿ ಡಿ.ಕೆ.ಶಿವಕುಮಾರ್ ಯೋಗೇಶ್ವರ್ ಅವರನ್ನೇ ಹೈಜಾಕ್ ಮಾಡಿದ್ದರು. ತನ್ನ ಬದ್ಧವೈರಿ ಯೋಗೇಶ್ವರ್ ಕರೆತಂದು ಗೆಲ್ಲಿಸಿ ರಾಜ್ಯದ ಪ್ರಭಾವಿ ಒಕ್ಕಲಿಗ ನಾಯಕ, ಮೋದಿ ಮಂತ್ರಿ ಕುಮಾರಸ್ವಾಮಿ ಅವರನ್ನು ಬಗ್ಗು ಬಡಿದಿದ್ದಾರೆ. ಈ ಮೂಲಕ ದೇವೇಗೌಡರ ಬಳಿಕ ಒಕ್ಕಲಿಗ ಸಮುದಾಯದ ನಾಯಕ ತಾನೆಂಬ ಸಂದೇಶ ರವಾನೆಗೆ ಅಡಿ ಇಟ್ಟಿದ್ದಾರೆ.
ಕಳೆದ ಒಂದೂವರೆ ವರ್ಷದಿಂದ ರಾಜಕೀಯ ಪ್ರಬುದ್ಧತೆ ಮೆರೆಯುತ್ತಾ ಸಿದ್ದರಾಮಯ್ಯ ನೆರಳಲ್ಲೇ ಆಡಳಿತ ನೀಡುತ್ತಿದ್ದಾರೆ. ಪ್ರಬಲ ವಿಪಕ್ಷ ಮೈತ್ರಿ ನಾಯಕರ ಹದ್ದಿನಗಣ್ಣಿನ ನಡುವೆಯೂ ಜಾಗರೂಕತೆಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಇದೆಲ್ಲವನ್ನು ಪಕ್ಷದ ಹೈಕಮಾಂಡ್ ಪರಿಗಣಿಸಿ ಖಂಡಿತವಾಗಿಯೂ ಡಿಕೆಶಿ ಅವರಿಗೆ ಮಣೆ ಹಾಕುತ್ತದೆ ಎಂಬ ವಿಶ್ವಾಸ ಡಿಕೆ ಬೆಂಬಲಿಗರದ್ದಾಗಿದೆ. ಮೂರೂ ಕ್ಷೇತ್ರಗಳ ಭರ್ಜರಿ ಗೆಲುವು ಡಿಕೆಶಿ ಪಾಲಿಗೆ ಗಜಕೇಸರಿ ಯೋಗ ತರಲಿದೆ ಎಂಬ ಅಚಲ ನಂಬಿಕೆ ಕನಕಪುರ ಬಂಡೆಯ ಬೆಂಬಲಿಗರಲ್ಲಿದೆ.