
ಬೆಂಗಳೂರು: “ನದಿಗಳು ನಮ್ಮ ಉಸಿರು” ಎಂಬ ಪೂರ್ಣಚಂದ್ರ ತೇಜಸ್ವಿಯವರ ಮಾತುಗಳೊಂದಿಗೆ ಸಿಎಂ ಸಿದ್ದರಾಮಯ್ಯ ಜಲಸಂಪನ್ಮೂಲ ಇಲಾಖೆಗೆ ಕ್ರಾಂತಿಕಾರಿ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಸುಪ್ರೀಂ ಕೋರ್ಟ್ನಲ್ಲಿ ತಮಿಳುನಾಡು ಅರ್ಜಿ ವಜಾಗೊಂಡ ಬೆನ್ನಲ್ಲೇ ಮೇಕೆದಾಟು ಯೋಜನೆ ಜಾರಿಗೆ ವೇಗ ನೀಡಲು ಸರ್ಕಾರ ನಿರ್ಧರಿಸಿದೆ. ಇತ್ತ ಉತ್ತರ ಕರ್ನಾಟಕದ UKP-3 ಯೋಜನೆಗಾಗಿ ಭೂಮಿ ನೀಡುವ ರೈತರಿಗೆ ಇತಿಹಾಸದಲ್ಲೇ ಮೊದಲ ಬಾರಿಗೆ ದಾಖಲೆಯ ಪರಿಹಾರ ಧನ ಘೋಷಿಸಲಾಗಿದೆ.
ಬಜೆಟ್ನ ಪ್ರಮುಖ ಮುಖ್ಯಾಂಶಗಳು:
- ಮೇಕೆದಾಟು ಜಯ: ಸುಪ್ರೀಂ ತೀರ್ಪಿನ ಬೆನ್ನಲ್ಲೇ ಮೇಕೆದಾಟು ಯೋಜನೆಯ ಪರಿಷ್ಕೃತ DPR ಸಿದ್ಧಪಡಿಸಿ ಕೇಂದ್ರಕ್ಕೆ ಸಲ್ಲಿಸಲು ನಿರ್ಧಾರ.
- ಭೂಸ್ವಾಧೀನಕ್ಕೆ ಬಂಪರ್ ದರ: ಆಲಮಟ್ಟಿ ಅಣೆಕಟ್ಟು ಎತ್ತರಿಸುವ ಯೋಜನೆಗಾಗಿ ಭೂಮಿ ನೀಡುವ ರೈತರಿಗೆ ಖುಷ್ಕಿ ಜಮೀನಿಗೆ ಎಕರೆಗೆ 30 ಲಕ್ಷ ರೂ. ಹಾಗೂ ತರಿ ಜಮೀನಿಗೆ ಎಕರೆಗೆ 40 ಲಕ್ಷ ರೂ. ನಿಗದಿ!
- ಎತ್ತಿನಹೊಳೆ ಹಂತ-2: ಎತ್ತಿನಹೊಳೆ ಯೋಜನೆಯ ಬಾಕಿ ಕಾಮಗಾರಿ ಪೂರ್ಣಗೊಳಿಸಿ, ಕೊರಟಗೆರೆಯ ವಡೇರಹಳ್ಳಿ ಬಳಿ 1.2 TMC ಸಾಮರ್ಥ್ಯದ ಜಲಾಶಯ ನಿರ್ಮಾಣ.
- ಭದ್ರಾ ಮೇಲ್ದಂಡೆ: ಕೇಂದ್ರದಿಂದ ಹಣ ಬರದಿದ್ದರೂ ರಾಜ್ಯದ ಹಣದಲ್ಲೇ ಚಿತ್ರದುರ್ಗ ಶಾಖಾ ಕಾಲುವೆ ಕಾಮಗಾರಿ 2027ಕ್ಕೆ ಪೂರ್ಣಗೊಳಿಸಲು ಪಣ.
- ತುಂಗಭದ್ರಾ ಗೇಟ್ ಬದಲಾವಣೆ: ಶಿಥಿಲಗೊಂಡಿರುವ ತುಂಗಭದ್ರಾ ಜಲಾಶಯದ 33 ಗೇಟುಗಳ ಬದಲಾವಣೆ ಕಾರ್ಯ ಮುಂಗಾರು ಪೂರ್ವದಲ್ಲೇ ಫಿನಿಷ್!
- ನವಲಿ ಸಮತೋಲನಾ ಜಲಾಶಯ: ಹೂಳಿನ ಸಮಸ್ಯೆ ನಿವಾರಣೆಗೆ ಆಂಧ್ರ ಮತ್ತು ತೆಲಂಗಾಣದೊಂದಿಗೆ ಮಾತುಕತೆ ನಡೆಸಿ ನವಲಿ ಜಲಾಶಯ ನಿರ್ಮಾಣಕ್ಕೆ ತೀವ್ರ ಪ್ರಯತ್ನ.
- ಮಹದಾಯಿ ಕಾಮಗಾರಿ: ಕೇಂದ್ರದಿಂದ ಅರಣ್ಯ ಇಲಾಖೆ ತೀರುವಳಿ ಸಿಕ್ಕ ತಕ್ಷಣ ಕಳಸಾ-ಬಂಡೂರಾ ನಾಲಾ ಯೋಜನೆ ಆರಂಭಿಸಲು ಸರ್ಕಾರ ಸಜ್ಜು.
- ಹೊಸ ಯೋಜನೆಗಳು: ಚಾಮರಾಜನಗರದ ಹನೂರಿನಲ್ಲಿ 490 ಕೋಟಿ ರೂ. ಮೊತ್ತದ ಉಡುತೊರೆಹಳ್ಳ ಯೋಜನೆ ಹಾಗೂ ವಿಜಯಪುರದ ಬಾಬಾ ನಗರದಲ್ಲಿ ಹೊಸ ಜಲಾಶಯ ನಿರ್ಮಾಣ.




